ಅಹಮದಾಬಾದ್‌: ನೂರು ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಮೂರನೇ ಬಾರಿ ವಿಶ್ವಕಪ್‌ (World Cup) ಗೆಲ್ಲುವ ಭಾರತದ (Team India) ಕನಸು ಭಗ್ನಗೊಂಡಿದೆ. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್‌ ಗೆದ್ದು ಸಂಭ್ರಮಿಸಿದೆ. ಈ ಮೂಲಕ 6 ಬಾರಿ ವಿಶ್ವಕಪ್‌ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ (Australia) ಹೊರಹೊಮ್ಮಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಪಡೆದ ಆಸ್ಟ್ರೇಲಿಯಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಟ್ರಾವಿಸ್‌ ಹೆಡ್‌ ಶತಕ ಮತ್ತು ಲಬುಶೇನ್‌ ಅವರ ಸಮಯೋಚಿತ ಅರ್ಧಶತಕದಿಂದ ಇನ್ನೂ 42 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು 241 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ಗೆ ಮುತ್ತಿಕ್ಕಿತು.

ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಡೇವಿಡ್‌ ವಾರ್ನರ್‌ ಔಟಾಗಬೇಕಿತ್ತು. ಬ್ಯಾಟ್‌ ತುದಿಗೆ ತಗುಲಿದ್ದ ಚೆಂಡು ಸ್ಲಿಪ್‌ನಲ್ಲಿದ್ದ ಕೊಹ್ಲಿ ಮತ್ತು ಶುಭಮನ್‌ ಮಧ್ಯೆ ತೂರಿ ಬೌಂಡರಿಗೆ ಹೋಗಿತ್ತು. ಜೀವದಾನ ಸಿಕ್ಕಿದರೂ ವಾರ್ನರ್‌ ಅವರನ್ನು ಶಮಿ ಔಟ್‌ ಮಾಡಿದರು. 7 ರನ್‌ಗಳಿಸಿದ ವಾರ್ನರ್‌ ಕೊಹ್ಲಿಗೆ ಸ್ಲಿಪ್‌ನಲ್ಲಿ ಕ್ಯಾಚ್‌ ನೀಡಿ ತೆರಳಿದರು. ಮಿಶೆಲ್‌ ಮಾರ್ಶ್‌ 15 ರನ್‌ ಗಳಿಸಿದರೆ, ಸ್ಟೀವ್‌ ಸ್ಮಿತ್‌ 4 ರನ್‌ ಗಳಿಸಿ ಬುಮ್ರಾಗೆ ಎಲ್‌ಬಿಡಬ್ಲ್ಯೂ ಆದರು.

47 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟ್ರಾವಿಸ್‌ ಹೆಡ್‌ಗೆ (Travis Head) ಜೊತೆಯಾದ ಲಬುಶೇನ್‌ (Marnus Labuschagne) 4ನೇ ವಿಕೆಟಿಗೆ 215 ಎಸೆತಗಳಲ್ಲಿ 192 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಂಡ ಗೆಲ್ಲಲು 2 ರನ್‌ ಬೇಕಿದ್ದಾಗ ಹೆಡ್‌ ಕ್ಯಾಚ್‌ ನೀಡಿ ಔಟಾದರು. ಬುಮ್ರಾ 2 ವಿಕೆಟ್‌ ಪಡೆದರೆ ಶಮಿ ಮತ್ತು ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಜಡೇಜಾ ವಿಕೆಟ್‌ ಕೀಳಲು ವಿಫಲರಾದರು. ಆರಂಭದಲ್ಲಿ ಮೂರು ವಿಕೆಟ್‌ ಉರುಳಿದಾಗ ಆಸೆ ಜೀವಂತವಾಗಿತ್ತು. ಆದರೆ ಹೆಡ್‌ ಮತ್ತು ಲಬುಶೇನ್‌ ಕ್ರೀಸ್‌ನಲ್ಲಿ ಬಲವಾಗಿ ನಿಂತ ಪರಿಣಾಮ ಪಂದ್ಯ ಭಾರತದ ಕೈ ಜಾರಿತು. ಅಂತಿಮವಾಗಿ ಹೆಡ್‌ 137 ರನ್‌ (120 ಎಸೆತ, 15 ಬೌಂಡರಿ, 4 ಸಿಕ್ಸ್‌) ಚಚ್ಚಿದರೆ, ಲಬುಶೇನ್‌ ಅಜೇಯ 58 ರನ್‌ ( 110 ಎಸೆತ, 4 ಬೌಂಡರಿ) ಹೊಡೆದರು. ಆರಂಭದಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾದ ಭಾರತ ತಂಡ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 50 ಓವರ್‌ಗಳಲ್ಲಿ 240 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಆರಂಭದಲ್ಲೇ ಅಸೀಸ್‌ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ರೋಹಿತ್‌ ಶರ್ಮಾ 31 ಎಸೆತಗಳಲ್ಲೇ 47 ರನ್‌ (3 ಸಿಕ್ಸರ್‌, 4 ಬೌಂಡರಿ) ಬಾರಿಸಿ ಔಟಾದರು. ಆದ್ರೆ ಸೆಮಿಸ್‌ನಲ್ಲಿ ಕಿವೀಸ್‌ ವಿರುದ್ಧ ಅಬ್ಬರಿಸಿದ್ದ ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ 4 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿ ಕೈಕೊಟ್ಟರು. ಈ ಬೆನ್ನಲ್ಲೇ ಶ್ರೇಯಸ್‌ ಅಯ್ಯರ್‌ ಕೂಡ ಕೇವಲ ಒಂದೇ ಒಂದು ಬೌಂಡರಿ ಗಳಿಸಿ ಔಟಾದರು. ಮೊದಲ 10.2 ಓವರ್‌ಗಳಲ್ಲೇ 81 ರನ್‌ಗಳಿಸಿದ್ದ ಭಾರತ ತಂಡ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಿತ್ತು. ಇದರಿಂದ 4ನೇ ವಿಕೆಟ್‌ಗೆ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್‌ ಜೋಡಿ ನಿಧಾನಗತಿಯ ಬ್ಯಾಟಿಂಗೆ ಮುಂದಾಯಿತು. ಈ ಜೋಡಿ 109 ಎಸೆತಗಳಲ್ಲಿ 67 ರನ್‌ಗಳ ಜವಾಬ್ದಾರಿಯುತ ಜೊತೆಯಾಟ ನೀಡಿದರೂ 97 ಎಸೆತಗಳಲ್ಲಿ ಕೇವಲ ಒಂದೇ ಒಂದು ಬೌಂಡರಿ ದಾಖಲಾಗಿತ್ತು.

ಉತ್ತಮ ರನ್‌ ಕಲೆಹಾಕುವ ಭರವಸೆ ಮೂಡಿಸಿದ್ದ ಈ ಜೋಡಿ ಆಟಕ್ಕೆ ಆಸ್ಟ್ರೇಲಿಯಾ ಕ್ಯಾಪ್ಟನ್‌ ಪ್ಯಾಟ್‌ ಕಮ್ಮಿನ್ಸ್‌ ಕೊಹ್ಲಿ ಆಟಕ್ಕೆ ಬ್ರೇಕ್‌ ಹಾಕಿದರು. 54 ರನ್‌ (63 ಎಸೆತ, 4 ಬೌಂಡರಿ) ಗಳಿಸಿ ಕೊಹ್ಲಿ ಔಟಾಗುತ್ತಿದ್ದಂತೆ, ಇಡೀ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತ್ತು. ಲಕ್ಷಾಂತರ ಅಭಿಮಾನಿಗಳು ತಲೆಯ ಮೇಲೆ ಕೈಹೊತ್ತು ಕುಳಿತರು. ಆ ನಂತರ 107 ಎಸೆತಗಳನ್ನು ಎದುರಿಸಿದ ಕೆ.ಎಲ್‌ ರಾಹುಲ್‌ ಕೇವಲ ಒಂದೇ ಒಂದು ಬೌಂಡರಿ ಸಿಡಿಸಿ 66 ರನ್‌ ಗಳಿಸಿದರು.

ನಂತರ ಕಣಕ್ಕಿಳಿದ ಯಾವೊಬ್ಬ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಟೀಂ ಇಂಡಿಯಾ ಪರ ಸೂರ್ಯಕುಮಾರ್‌ ಯಾದವ್‌ 15 ರನ್‌, ರವೀಂದ್ರ ಜಡೇಜಾ 9 ರನ್‌, ಮೊಹಮ್ಮದ್‌ ಶಮಿ 6 ರನ್‌, ಜಸ್ಪ್ರೀತ್‌ ಬುಮ್ರಾ 1 ರನ್‌, ಕುಲ್ದೀಪ್‌ ಯಾದವ್‌ 10 ರನ್‌ ಹಾಗೂ ಮೊಹಮ್ಮದ್‌ ಸಿರಾಜ್‌ 9 ರನ್‌ ಗಳಿಸಿ ಔಟಾದರು.

ಆಸೀಸ್‌ ಪರ ಮಾರಕ ದಾಳಿ ನಡೆಸಿದ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌, ಕಿತ್ತರೆ, ಜೋಶ್‌ ಹೇಜಲ್‌ವುಡ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ