ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಜಿಗಣಿಯ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಮೃತದೇಹ ಬೆಂಗಳೂರಿಗೆ (Bengaluru) ಆಗಮಿಸಿದೆ. ಹೆಚ್‍ಎಎಲ್‍ನಲ್ಲಿ (HAL) ಮೃತ ಯೋಧನ ಪಾರ್ಥಿವ ಶರೀರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಸಚಿವ ಕೆ.ಜೆ ಜಾರ್ಜ್, ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಮುಂತಾದ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ಬುಧವಾರ ಹಾಗೂ ಗುರುವಾರದ ನಡುವೆ ರಜೌರಿಯಲ್ಲಿ ಉಗ್ರರು ಹಾಗೂ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಸಾವಿಗೀಡಾಗಿದ್ದರು. ಇದರಲ್ಲಿ ಕನ್ನಡಿಗ ಕ್ಯಾಪ್ಟನ್ ಪ್ರಾಂಜಲ್ ಕೂಡ ಸೇರಿದ್ದಾರೆ. ಅವರ ಪಾರ್ಥಿವ ಶರೀರವನ್ನು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ನಂದನವನ ಬಡಾವಣೆಯ ನಿವಾಸಕ್ಕೆ ತರಲಾಗುತ್ತಿದೆ. ಜಮ್ಮು ಕಾಶ್ಮೀರದಿಂದ 11.30 ಕ್ಕೆ ವಿಶೇಷ ಸೇನೆಯ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಜಮ್ಮು ಕಾಶ್ಮೀರದಿಂದ ದೆಹಲಿಗೆ ತರಲಾಗಿತ್ತು. ಬಳಿಕ ದೆಹಲಿಯಿಂದ ಬೆಂಗಳೂರಿನ ಎಚ್‍ಎಎಲ್‍ಗೆ ತರಲಾಯಿತು. ಎಚ್‍ಎಎಲ್ ನಿಂದ ರಸ್ತೆ ಮಾರ್ಗವಾಗಿ ಅಂಬುಲೆನ್ಸ್ ಮೂಲಕ ಜಿಗಣಿಗೆ ಪಾರ್ಥಿವ ಶರೀರವನ್ನು ಸಾಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಂದನವನ ಬಡಾವಣೆಯ ನಿವಾಸದಲ್ಲಿ ರಾತ್ರಿ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನಡೆಸಲು ಈಗಾಗಲೇ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಈ ಕಾರ್ಯದಲ್ಲಿ ಕೇವಲ ಕುಟುಂಬಸ್ಥರಿಗೆ ಮಾತ್ರ ಅವಕಾಶ ಇದೆ. ಶನಿವಾರ ಬೆಳಗ್ಗೆ ಪಾರ್ಥಿವ ಶರೀರಕ್ಕೆ ಮಿಲಿಟರಿ ಪಡೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. 7 ರಿಂದ 10 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಕಲ್ಪಿಸಲು ಜಿಗಣಿ ಪೊಲೀಸರು ಹಾಗೂ ಈಗಾಗಲೇ ಸ್ಥಳದಲ್ಲಿ ಬೀಡುಬಿಟ್ಟಿರುವ ಮಿಲಿಟರಿ ಪಡೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂತಿಮ ದರ್ಶನದ ಬಳಿಕ ಸೋಮ ಸುಂದರ ಪಾಳ್ಯದ ಕೂಡ್ಲು ಗೇಟ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಯಾಗಿದೆ. ಅಂತಿಮ ನಮನದ ಬಳಿಕ ಸಿದ್ದರಾಮಯ್ಯ ಮಾತನಾಡಿ, ಸಾರ್ವಜನಿಕರ ರಕ್ಷಣೆಗಾಗಿ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಅವರ ಈ ಅಗಲುವಿಕೆ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನಿಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸರ್ಕಾರದಿಂದ 50.ಲಕ್ಷ ರೂ. ಪರಿಹಾರ ಕೊಡುತ್ತೇವೆ ಎಂದಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಹುತಾತ್ಮ ಯೋಧನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ, ಹುತಾತ್ಮ ಯೋಧನಿಗೆ ಗೌರವಾರ್ಥವಾಗಿ ಶನಿವಾರ ರಾಜ್ಯ ಸರ್ಕಾರದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ ಎಂದಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ