ಶಿಮ್ಲಾ(ಡಿ.27) ಹೊಸ ವರ್ಷ ಬರಮಾಡಿಕೊಳ್ಳಲು ತಯಾರಿಗಳು ನಡೆಯುತ್ತಿದೆ. ಹಲವರು ಈಗಾಗಲೇ ಪ್ರವಾಸಿ ತಾಣ, ನೆಚ್ಚಿನ ತಾಣಗಳನ್ನು ತಲುಪಿದ್ದಾರೆ. ಆದರೆ ಪ್ರವಾಸಿ ತಾಣಗಳಲ್ಲಿ ಇದೀಗ ಕಳ್ಳರ ಹಾವಳಿಗಳು ಹೆಚ್ಚಾಗಿದೆ. ನಿಲ್ಲಿಸಿರುವ ಕಾರುಗಳ ಗಾಜುಗಳನ್ನು ಕೆಮಿಕಲ್ ಬಳಸಿ ಸುಲಭವಾಗಿ ಒಡೆದು ಕಾರಿನೊಳಗಿನ ಅಮೂಲ್ಯ ವಸ್ತುಗಳನ್ನು ದೋಚುವ ಗ್ಯಾಂಗ್ ಎಲ್ಲೆಡೆ ಸಕ್ರಿಯವಾಗಿದೆ. ಈ ಕುರಿತು ಹಿಮಾಚಲ ಪ್ರದೇಶ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕ್ರಿಸ್ಮಸ್ ರಜೆಗಳಿಂದ ಹಿಮಾಚಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತ್ತು. ಎಲ್ಲೆಡೆ ಪ್ರವಾಸಿಗಳಿಂದಲೇ ತುಂಬಿ ತುಳುಕಿತ್ತು. ಈ ವೇಳೆ ಹಲವರ ಕಾರುಗಳಿಂದ ಅಮೂಲ್ಯ ವಸ್ತುಗಳನ್ನು ಇದೇ ರೀತಿ ಎಗರಿಸಲಾಗಿದೆ. ಕಳೆದ ವಾರದಿಂದ ಹಿಮಾಚಲ ಪ್ರದೇಶದ ತುಂಬಾ ಪ್ರವಾಸಿಗಳೇ ತುಂಬಿ ಹೋಗಿದ್ದಾರೆ. ಎಲ್ಲಾ ರಸ್ತೆ, ಮೈದಾನ, ತಾಣಗಳಲ್ಲಿ ಪ್ರವಾಸಿಗಳು ಹಾಗೂ ವಾಹನಗಳೇ ಕಾಣುತ್ತಿದೆ. ಕೆಲ ಪ್ರದೇಶಗಳಲ್ಲಿ 5 ರಿಂದ 10 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿತ್ತು. ವಾಹನ ಪಾರ್ಕ್ ಮಾಡಲು ಜಾಗವಿಲ್ಲದೆ ರಸ್ತೆ ಬದಿ, ಮೈದಾನ ಸೇರಿದಂತೆ ಹಲವೆಡೆ ಪಾರ್ಕಿಂಗ್ ಮಾಡಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಸುಲಭವಾಗಿ ಕೆಮಿಕಲ್ ಬಳಸಿ ಒಡೆಯುತ್ತಿದ್ದಾರೆ. ಬಳಿಕ ಕಾರಿನೊಳಗೆ ಭದ್ರವಾಗಿ ಇಟ್ಟಿರುವ ಅಮೂಲ್ಯ ವಸ್ತುಗಳನ್ನು ಕದಿಯುವ ಘಟನೆಗಳು ಹೆಚ್ಚಾಗುತ್ತಿದೆ. ಹಿಮಾಚಲ ಪ್ರದೇಶ ಪೊಲೀಸರು ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ನಡೆದ ಕಳ್ಳತನದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಟಾಟಾ ಹ್ಯಾರಿಯರ್ ಕಾರು ಪಾರ್ಕ್ ಮಾಡಲಾಗಿತ್ತು. ಕಳ್ಳನೊಬ್ಬ ಒಂದೆರೆಡು ನಿಮಿಷ ಅತ್ತ ಇತ್ತ ಗಮನಿಸಿ, ಜೇಬಿನಿಂದ ಕೆಮಿಕಲ್ ತೆಗೆದಿದ್ದಾನೆ. ಬಳಿಕ ಕಾರಿನ ಗಾಜಿನ ಮೇಲೆ ಸಿಂಪಡಿಸಿದ್ದಾನೆ. ಒಂದೆ ಸೆಕೆಂಡ್‌ನಲ್ಲಿ ಕಾರಿನ ಗಾಜು ಪುಡಿ ಪುಡಿಯಾಗಿದೆ. ಬಳಿಕ ಸುಲಭವಾಗಿ ಕಾರಿನೊಳಗಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. ಈ ವಿಡಿಯೋ ಹಂಚಿಕೊಂಡಿರುವ ಹಿಮಾಚಲ ಪ್ರದೇಶ ಪೊಲೀಸರು, ಕಳ್ಳರ ಹೊಸ ವಿಧಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದು ಕೇವಲ ಹಿಮಾಚಲ ಪ್ರದೇಶದ ಕತೆಯಲ್ಲ, ದೇಶದ ಬಹುತೇಕ ಕಡೆಗಳಲ್ಲಿ ಈ ರೀತಿ ಕಳ್ಳತನ ಮಾಡುವ ಗ್ಯಾಂಗ್ ಇದೆ. ಹೀಗಾಗಿ ಪ್ರವಾಸಿಗರು, ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್ ಮಾಡುವ ವ್ಯಕ್ತಿಗಳು ಎಚ್ಚರವಹಿಸುವುದು ಅತೀ ಅಗತ್ಯ. ಕಾರಿನೊಳಗೆ ಲಗೇಜ್, ಅಮೂಲ್ಯ ವಸ್ತುಗಳನ್ನು ಇಡುವ ಬದಲು, ಕಾರಿನ ಡಿಕ್ಕಿಯೊಳಗೆ ಇಡುವುದು ಹೆಚ್ಚು ಸೂಕ್ತ. ಜೊತೆಗೆ ಸುರಕ್ಷಿತ ಕಡೆಗಳಲ್ಲಿ ಪಾರ್ಕಿಂಗ್ ಮಾಡುವುದು ಅದಕ್ಕಿಂತ ಉತ್ತಮ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ