ಗುಜರಾತಿನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಗುಜರಾತ್ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಸ್ತುತ, ಹಡಗು ಮಂಗಳೂರಿನ ಎನ್ಎಂಪಿಟಿಗೆ ಸಮೀಪವಿರುವ ಸುರತ್ಕಲ್ ಬಳಿ ಸಮುದ್ರದ ಮಧ್ಯದಲ್ಲಿ ಲಂಗರು ಹಾಕಿದೆ. ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್ ಎಚ್.ಎನ್ ಅವರು ಜೂ.19ರಂದು ಸಂಭವಿಸಿದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದರೂ, ಮತ್ತೊಮ್ಮೆ ಬೆಂಕಿ ಕಾಣಿಸಿಕೊಳ್ಳುವ, ಇದರಿಂದ ಹಡಗು ಸಂಪೂರ್ಣ ಹಾನಿಗೊಂಡು ಮುಳುಗುವ ಹಾಗೂ ಅದರಲ್ಲಿರುವ ತೈಲ ಸೋರಿಕೆಯಾಗಿ ಸಮುದ್ರ ಸೇರುವ ಅಪಾಯ ಇರುವುದರಿಂದ ಸಮುದ್ರ ಮಾಲಿನ್ಯವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ವ್ಯಾಪಿಸುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಯಾವುದೇ ಅಂತಹ ಸೂಚನೆ ಕಂಡುಬಂದರೂ ಮಾಹಿತಿ ನೀಡುವಂತೆ ಡಿಸಿ ಹಾಗೂ ಎಸ್ಪಿ ತಿಳಿಸಿದ್ದಾರೆ.ಎಸ್ಪಿ ಮಿಥುನ್ “ಹಡಗಿನಲ್ಲಿ ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದೆ. ಸದ್ಯಕ್ಕೆ ಯಾವುದೇ ತೈಲ ಸೋರಿಕೆಯಾಗಿಲ್ಲ, ತಜ್ಞರ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮದ ಬಗ್ಗೆ ಸಂಬಂಧಪಟ್ಟವರು ನಿರ್ಧರಿಸುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದರು.