Advertisement

ಮಡಿಕೇರಿ ಆ.11 : ಸರಣಿ ಭೂಕಂಪನ ಮತ್ತು ಜಲಸ್ಫೋಟಗಳಿಂದ ಸಂಕಷ್ಟ ಎದುರಿಸುತ್ತಿರುವ ಚೆಂಬು ಗ್ರಾಮದ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಸರ್ಕಾರ ಗ್ರಾಮವನ್ನು ದತ್ತು ಪಡೆದು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮಾಹಿತಿ ಹಕ್ಕು ಮತ್ತು ಸಮಾಜಿಕ ಹಕ್ಕು ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜಿತ್ ಪಲ್ತಡು ಊರುಬೈಲು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚೆಂಬು ಗ್ರಾಮದ ಜನರ ಸಂಕಷ್ಟದ ಬದುಕಿನ ಬಗ್ಗೆ ಯಾರಿಗೂ ಕಾಳಜಿ ಇಲ್ಲದಾಗಿದೆ. ಮಳೆ ಅನಾಹುತಗಳು ಸಂಭವಿಸಿದ ನಂತರ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಬಂದು ಹೋಗಿದ್ದಾರೆಯೇ ಹೊರತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಯಾವುದೇ ವಿಶ್ವಾಸ ಮೂಡಿಸಿಲ್ಲ ಎಂದು ಆರೋಪಿಸಿದ್ದಾರೆ. ಸರಣಿ ಭೂಕಂಪನವಾದಾಗ ತೀವ್ರತೆಯನ್ನು ತಿಳಿಸಿ ಭಯ ಪಡದಂತೆ ಜನರ ಮನವೊಲಿಸುವ ಪ್ರಯತ್ನ ಮಾಡಲಾಯಿತು. ನಂತರ ‘ಭೂಕಂಪನ ಮಾಪನ ಉಪಕೇಂದ್ರ’ ವನ್ನು ಸ್ಥಾಪಿಸಲಾಯಿತು. ಆದರೆ ಭೂಕಂಪನಕ್ಕೆ ಕಾರಣವೇನು, ಈ ಕಂಪನದಿಂದ ಮುಂದಿನ ದಿನಗಳಲ್ಲಿ ಜಲಸ್ಫೋಟವಾಗಬಹುದು ಎನ್ನುವ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಅಲ್ಲದೆ ಇಲ್ಲಿಯವರೆಗೆ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿರುವ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಸಿಲ್ಲ. ಚೆಂಬು ಗ್ರಾಮದ ಜನ ಯಾವ ರೀತಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವ ಪ್ರದೇಶಗಳು ಸುರಕ್ಷಿತವಲ್ಲ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ನೀಡಿಲ್ಲ. ಮಹಾಮಳೆಯ ಸಂದರ್ಭ ಜಲಸ್ಫೋಟ ಸಂಭವಿಸಿ ಸಾಕಷ್ಟು ಕಷ್ಟ, ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಜನರ ಜೀವ ಉಳಿದುಕೊಂಡಿದೆ. ರಸ್ತೆ, ಸೇತುವೆ, ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ ಆತಂಕದಲ್ಲೇ ದಿನ ಕಳೆಯುವಂತ್ತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೆಂಬು ಗ್ರಾಮದಲ್ಲಿ ಸರ್ವಋತು ರಸ್ತೆ, ಸೇತುವೆ ಮತ್ತು ತಡೆಗೋಡೆಗಳನ್ನು ವೈಜ್ಞಾನಿಕ ರೂಪದಲ್ಲಿ ನಿರ್ಮಿಸಬೇಕು. ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸೂಚಿಸಬೇಕು. ಸರ್ಕಾರ ಗ್ರಾಮವನ್ನು ದತ್ತು ಪಡೆದು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ವಿಜ್ಞಾನಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಪ್ರಾಕೃತಿಕ ವಿಕೋಪಕ್ಕೆ ನೈಜ ಕಾರಣ ಏನು ಎನ್ನುವುದನ್ನು ಪತ್ತೆ ಹಚ್ಚಿ ಮುಂದೆ ಆಗಬಹುದಾದ ಅನಾಹುತಗಳಿಂದ ಗ್ರಾಮಸ್ಥರನ್ನು ಪಾರು ಮಾಡಬೇಕೆಂದು ರಜಿತ್ ಒತ್ತಾಯಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ