ಸುಳ್ಯ: ಚಿಕೂನ್ ಗುನ್ಯ, ಮಲೇರಿಯಾ, ಡೆಂಗ್ಯೂ, ಹೀಗೆ ಪ್ರತಿಯೊಂದೂ ಕಾಯಿಲೆಗಳ ತಾಣ ಸುಳ್ಯ ಆಗಿತ್ತು, ತಾಲೂಕು ಸಾರ್ವಜನಿಕ ಆಸ್ಪತ್ರೆ ಇದ್ದರು ಇಲ್ಲಿ ಸೌಕರ್ಯಗಳು ಅಸ್ಟಕ್ಕಷ್ಟೇ ಇದ್ದವು. ಆಸ್ಪತ್ರೆಗೆ ಬೇಕಾದ ಅಗತ್ಯ ಬೇಡಿಕೆಗಳು ಕಮ್ಮಿಯೇನಲ್ಲ. ಇದೀಗ ಸುಳ್ಯ ಶಾಸಕ ಎಸ್.ಅಂಗಾರ ಸಚಿವರಾದ ಬಳಿಕ ಸಚಿವರ ಪ್ರಯತ್ನ ಆರೋಗ್ಯ ರಕ್ಷಾ ಸಮಿತಿ ಹಾಗು ಜನಪ್ರತಿನಿಧಿಗಳ ಮುತುವರ್ಜಿಯಿಂದ ತಾಲೂಕು ಆಸ್ಪತ್ರೆಗೆ ಅನುದಾನ ಹರಿದು ಬಂದಿದ್ದು ಅಭಿವೃದ್ಧಿ ಆರಂಭಗೊಂಡಿದೆ. ಆಸ್ಪತ್ರೆಯ ಅಭಿವೃದ್ಧಿಗೆ ಬರೋಬರಿ ₹5.02 ಕೋಟಿ ಅನುದಾನ ಹರಿದು ಬಂದಿದ್ದು, ಕೆಲವು ಅಭಿವೃದ್ಧಿ ಕೆಲಸಗಳು ಪೂರ್ತಿಗೊಂಡಿದ್ದರೆ, ಕೆಲವು ಟೆಂಡರ್ ಹಂತದಲ್ಲಿದೆ. ಉಳಿದವು ಮುಂದಿನ ಕೆಲವು ತಿಂಗಳಲ್ಲಿ ಪೂರ್ತಿಯಾಗಲಿದೆ. 22 ಬೆಡ್‌ಗಳ ಐಸಿಯು ವಾರ್ಡ್ ನಿರ್ಮಾಣ ಪೂರ್ತಿಗೊಂಡಿದೆ. ₹55 ಲಕ್ಷದ ಅತ್ಯಾಧುನಿಕ ಪ್ರಯೋಗಾಲಯ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ಆಮ್ಲಜನಕ ಘಟಕಕ್ಕೆ ₹56 ಲಕ್ಷ ರೂ ಅನುದಾನ ಮಂಜೂರಾಗಿದೆ. ಆಸ್ಪತ್ರೆಯ ಮೂಲಭೂತ ಅಭಿವೃದ್ಧಿಗೆ ₹1.92 ಕೋಟಿ ಅನುದಾನ ಮಂಜೂರಾಗಿದೆ. ರಸ್ತೆ ಅಭಿವೃದ್ಧಿಗೆ ₹17 ಲಕ್ಷ, ಆಸ್ಪತ್ರೆಯ ಸ್ಥಳಕ್ಕೆ ಆವರಣ ಗೋಡೆ ನಿರ್ಮಾಣಕ್ಕೆ 22 ಲಕ್ಷ ಅನುದಾನ ಇದೆ. ₹1.60 ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮತ್ತು ಸುಸಜ್ಜಿತ ಐಸಿಯು ವಾರ್ಡ್ ಸಿದ್ಧಗೊಂಡಿದೆ. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ₹1.60 ಕೋಟಿ ಅನುದಾನದಲ್ಲಿ 22 ಬೆಡ್‌ಗಳ ಐಸಿಯು ವಾರ್ಡ್ ಸಿದ್ಧಗೊಂಡಿದೆ. 250 ಕೆವಿಯ ಜನರೇಟರ್, 250 ಕೆವಿಯ ಟ್ರಾನ್ಸ್‌ಫಾರ್ಮರ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ
ಅತ್ಯಾಧುನಿಕ ವ್ಯವಸ್ಥೆಯ
ಪ್ರಯೋಗಾಲಯ ‘ಬ್ಲಾಕ್ ಪಬ್ಲಿಕ್ ಹೆಲ್ತ್ ಲಬೋರೇಟರಿ’ ಸುಳ್ಯ ತಾಲೂಕು ಆಸ್ಪತ್ರೆಗೆ ಮಂಜೂರಾಗಿದೆ. ₹55 ಲಕ್ಷದ ಪ್ರಯೋಗಾಲಯ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಜಿಲ್ಲಾ ಆಸ್ಪತ್ರೆಗಳಿಗೆ ಸಮಾನಾದ ರೀತಿಯಲ್ಲಿನ ಪರೀಕ್ಷೆಗಳನ್ನು ನಡೆಸಲು ಈ ಲ್ಯಾಬ್ ನೆರವಾಗಲಿದೆ. ಡೆಂಗ್ಯೂ, ಚಿಕೂನ್ ಗೂನ್ಯ, ಇಲಿಜ್ವರ, ಕೋವಿಡ್ ಮತ್ತಿತರ ರೋಗಗಳ ಪರೀಕ್ಷಾ ಮಾದರಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಬೇಕಾಗಿತ್ತು. ಈ ಲ್ಯಾಬ್ ಆದರೆ ಆ ರೀತಿಯ ಪರೀಕ್ಷೆಗಳನ್ನು ತಾಲೂಕು ಆಸ್ಪತ್ರೆಯಲ್ಲಿಯೇ ಮಾಡಬಹುದಾಗಿದೆ.ಲ್ಯಾಬ್ ಕಾಮಗಾರಿ ಆದ ಬಳಿಕ ಯಂತ್ರಗಳು, ಉಪಕರಣಗಳು ಸೇರಿ ಇನ್ನಷ್ಟು ಮೊತ್ತದ ಅನುದಾನ ಬರಲಿದೆ. ಸುಳ್ಯ ತಾಲೂಕು ಆಸ್ಪತ್ರೆಗೆ ಮತ್ತೊಂದು ಆಮ್ಲಜನಕ ಘಟಕ ಮಂಜೂರಾಗಿದೆ. 6000 ಲೀಟರ್ ಲಿಕ್ವಿಡ್ ಆಕ್ಸಿಜನ್ ಸಾಮರ್ಥ್ಯದ ಘಟಕ ಮಂಜೂರಾಗಿದ್ದು ಘಟಕ, ಟ್ಯಾಂಕ್ ಮತ್ತಿತರ ನಿರ್ಮಾಣ ಮಾಡಲಾಗುವುದು. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ ಸಹಕಾರದಲ್ಲಿ ನಿರ್ಮಾಣವಾದ ಆಮ್ಲಜನಕ ಘಟಕ ಈಗಾಗಲೇ ಕಾರ್ಯಾಚರಿಸುತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಮೂಲಕ ಸುಳ್ಯ ತಾಲೂಕು ಆಸ್ಪತ್ರೆಗೆ ಎಸ್‌ಸಿ ಎಸ್‌ಪಿ ಯೋಜನೆಯ ಮೂಲಕ ₹1.92 ಕೋಟಿ ಅನುದಾನ ಮಂಜೂರಾಗಿದೆ.ಈ ಅನುದಾನದಲ್ಲಿ ಆಸ್ಪತ್ರೆಗೆ ಸುಸಜ್ಜಿತ ಶವಾಗಾರ ನಿರ್ಮಾಣ, ತುರ್ತು ನಿಗಾ ಘಟಕದ ನವೀಕರಣ, ಡಯಾಲಿಸಿಸ್ ಕೇಂದ್ರದ ನವೀಕರಣ, ಆಸ್ಪತ್ರೆಯ ನವೀಕರಣ ಮತ್ತಿತರ ಕೆಲಸಗಳನ್ನು ಮಾಡಲಾಗುವುದು.
ಆಸ್ಪತ್ರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಇಲಾಖೆಯಿಂದ ₹17 ಲಕ್ಷ ರೂ ಮಂಜೂರಾಗಿದೆ. ಅಲ್ಲದೆ ಆಸ್ಪತ್ರೆಯ ಜಾಗಕ್ಕೆ ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ₹22 ಲಕ್ಷ ಮಂಜೂರಾಗಿದೆ.

ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಿದರು. ಮಂಜೂರಾದ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಇಂಜಿನಿಯರ್‌ಗಳಿಗೆ ಸೂಚಿಸಿದರು. ನಿರ್ಮಾಣಗೊಂಡ ಐಸಿಯು ವಾರ್ಡ್ ವೀಕ್ಷಿಸಿದರು. ಆಮ್ಲಜನಕ ಘಟಕ ನಿರ್ಮಾಣಕ್ಕೆ ಸ್ಥಳದ ಪರಿಶೀಲನೆ ನಡೆಸಿದರು.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್ ಕೇರ್ಪಳ, ಡಾ.ಮನೋಜ್ ಅಡ್ಡಂತ್ತಡ್ಕ, ಗಿರೀಶ್ ಕಲ್ಲುಗದ್ದೆ, ಡಾ.ವಿದ್ಯಾಶಾರದೆ, ಕೇಶವ ಮಾಸ್ತರ್,ಸುಬ್ರಹ್ಮಣ್ಯ ಕೊಡಿಯಾಲಬೈಲು, ದಾಮೋದರ ಮಂಚಿ, ಆಸ್ಪತ್ರೆಯ ಡಾ.ಹಿಮಕರ,ಚಂದ್ರಶೇಖರ ನೆಡಿಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಪ್ರಭಾರ) ರಾಜೇಶ್ ರೈ, ಕಿರಿಯ ಇಂಜಿನಿಯರ್ ರಾಘವೇಂದ್ರ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‌ಗಳಾದ ಮಣಿಕಂಠ, ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.