ಸುಳ್ಯ: ತಾಲೂಕಿನ ಕೊಡಿಯಾಲಬೈಲ್‌ನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಾರ್ಚ್ 12 ರಂದು ನಡೆದಿದೆ.

ಮೃತರನ್ನು ಮಂಜು (42) ಎಂದು ಗುರುತಿಸಲಾಗಿದೆ. ಮೂಲತಃ ಕೆ.ಆರ್. ನಗರದವರಾದ ಇವರು, ಆರಂಭದಲ್ಲಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ನಂತರ ಬಡ್ತಿ ಪಡೆದು ಕಳೆದ 2 ವರ್ಷಗಳಿಂದ ಈ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

​ಮಧ್ಯಾಹ್ನದವರೆಗೂ ಕಾಲೇಜಿನ ಸಿಬ್ಬಂದಿ ಜೊತೆ ಲವಲವಿಕೆಯಿಂದಲೇ ಮಾತನಾಡಿದ್ದ ಅವರು, ನಂತರ ‘ಸ್ವಲ್ಪ ಹುಷಾರಿಲ್ಲ’ ಎಂದು ಹೇಳಿ ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಆ ಬಳಿಕ ಔಷಧ ತರಲೆಂದು ಮೆಡಿಕಲ್ ಸ್ಟೋರ್‌ಗೆ ಬಂದಿದ್ದಾಗ, ಸುಳ್ಯದ ಶ್ರೀರಾಮ್ ಪೇಟೆ ಬಳಿ ಹಠಾತ್ತನೆ ಕುಸಿದು ಬಿದ್ದಿದ್ದಾರೆ.

​ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದುಬಂದಿದೆ. ನೆಚ್ಚಿನ ಉಪನ್ಯಾಸಕನ ದಿಢೀರ್ ಸಾವಿನಿಂದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.

Leave a Reply

Your email address will not be published. Required fields are marked *