2022 ರ ಸ್ಯಾಂಡಲ್ ವುಡ್ ಸೂಪರ್ ಹಿಟ್ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದ ‘ಕಾಂತಾರ’ ಸಿನಿಮಾ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ, ಪರಭಾಷಿಕರನ್ನೂ ಸೆಳೆದಿತ್ತು. ಆರಂಭದಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಈ ಸಿನಿಮಾ, ಕರ್ನಾಟಕದಲ್ಲಿ ಸಿಕ್ಕ ಪ್ರತಿಕ್ರಿಯೆಗೆ ಪರಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಮೋಡಿ ಮಾಡಿ ಕೋಟಿ ಗಳಿಸಿತು. ಸಿನಿಮಾ ಒಟಿಟಿ ಅಂಗಳದಲ್ಲಿಯೂ ಮೆಚ್ಚುಗೆ ಪಡೆಯಿತು. ಹೀಗಿರುವಾಗಲೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೂ ಈ ಸಿನಿಮಾ ನಾಮನಿರ್ದೇಶನಗೊಂಡಿತ್ತು. ಈಗ ಅದೇ ಆಸ್ಕರ್ ವಿಚಾರವಾಗಿ ಅಪ್‌ಡೇಟ್ ಒಂದು ಹೊರಬಿದ್ದಿದೆ. ಅಂದರೆ ಕಾಂತಾರ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಅರ್ಹತೆ ಪಡೆದುಕೊಂಡಿದೆ. ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಈ ಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಸ್ಪರ್ಧಾ ಪಟ್ಟಿಯ ಮುಖ್ಯ ವಿಭಾಗದಲ್ಲಿ ಕಾಂತಾರ ಸಿನಿಮಾ ಎಂಟ್ರಿ ಪಡೆದುಕೊಂಡಿದೆ. ಅದೇ ರೀತಿ ಕಾಂತಾರ ಸಿನಿಮಾದ ಜತೆಗೆ ಇತರ 301 ಚಿತ್ರಗಳೂ ಅರ್ಹತೆ ಪಡೆದಿದ್ದು, ಇವೆಲ್ಲದರ ನಡುವೆ ಸೆಣೆಸಿ ಮುನ್ನಡೆಯಬೇಕಿದೆ. ಸದ್ಯ ಅರ್ಹತೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದೇ ತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ. ಅಂದಹಾಗೆ, ಜನವರಿ 24ರಂದು ಆಸ್ಕರ್ ಅಂತಿಮ ನಾಮನಿರ್ದೇಶನದ ಪಟ್ಟಿ ಬಿಡುಗಡೆ ಆಗಲಿದೆ. “ಕಾಂತಾರ ಚಿತ್ರವು ಎರಡು ವಿಭಾಗಗಳಲ್ಲಿ ಆಸ್ಕರ್ ಅರ್ಹತೆ ಗಳಿಸಿದೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷ ಎನಿಸುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಮತ್ತೊಂದು ಪ್ರಯಾಣವನ್ನು ಎದುರು ನೋಡುತ್ತಿದ್ದೇವೆ” ಎಂದು ಹೊಂಬಾಳೆ ಟ್ವಿಟ್ಟರ್ ಪೋಸ್ಟ್ ಮಾಡಿದೆ.
Advertisement
Advertisement