ಪ್ರೀತಿಗೆ ಯಾವುದೇ ಮಿತಿ ಅಥವಾ ಗಡಿಗಳಿಲ್ಲ. ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ಭಾಷೆ, ವಯಸ್ಸು ಹಾಗೂ ಅಂತಸ್ತು ಎಲ್ಲವನ್ನು ಮೀರಿದ್ದು ಎನ್ನುತ್ತಾರೆ. ತನ್ನ ಪ್ರೇಮಿಯನ್ನು ಮದುವೆಯಾಗಲು ದೇಶ ಬಿಟ್ಟು ಹೋಗುವವರೂ ಇದ್ದಾರೆ, ವಿದೇಶದಿಂದ ಬಂದವರೂ ಇದ್ದಾರೆ.

ಪ್ರೀತಿ ಒಂದು ಮಧುರ ಭಾವನೆ. ಪ್ರೀತಿ ಎಂದರೆ ಎರಡು ಮನಸ್ಸುಗಳ ಮಿಲನ. ಪ್ರೀತಿಸಿದವರನ್ನು ಪಡೆದುಕೊಳ್ಳಲು ಕೆಲವರು ಏನು ಬೇಕಾದರೂ ಮಾಡುತ್ತಾರೆ. ಕೆಲವರು ಹಿರಿಯರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಎರಡೂ ಮನೆಯವರನ್ನು ಒಪ್ಪಿಸಿ, ಪ್ರೀತಿಯಲ್ಲಿ ಗೆದ್ದು ಮದುವೆಯಾಗಿದ್ದಾರೆ.

ಯುವಕರು ತೃತೀಯಲಿಂಗಿಗಳನ್ನು ಪ್ರೀತಿಸಿ ಮದುವೆಯಾಗುವುದು ಇದೀಗ ಹೊಸ ಟ್ರೆಂಡ್ ಆಗಿಬಿಟ್ಟಿದೆ. ಇತ್ತೀಚೆಗೆ ಯುವಕನೊಬ್ಬ ತೃತೀಯಲಿಂಗಿಯೊಬ್ಬಳನ್ನು ಪ್ರೀತಿಸಿ, ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದಾನೆ. ಈ ಘಟನೆ ತೆಲಂಗಾಣದ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗೊಲ್ಲಪಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದ ನಿವಾಸಿ ಶ್ರೀನಿವಾಸ ಮಲ್ಯ, ಅದೇ ಮಂಡಲದ ಮದಂಪಳ್ಳಿಯ ತೃತೀಯಲಿಂಗಿ ಕರುಣಾಂಜಲಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಕರುಣಾಂಜಲಿ ಶ್ರೀನಿವಾಸ್ ಸಂಪರ್ಕಕ್ಕೆ ಬಂದಿದ್ದಳು. ಆರಂಭದ ಪರಿಚಯ, ಪ್ರೀತಿಗೆ ತಿರುಗಿ, ಇದೀಗ ಇಬ್ಬರು ಮದುವೆಯಾಗಿದ್ದಾರೆ.

ಶ್ರೀನಿವಾಸ್ ಅವರು ಉದ್ಯೋಗ ನಿಮಿತ್ತ ದುಬೈಗೆ ಹೋಗಿದ್ದರು. ಇತ್ತೀಚೆಗೆ ಅಲ್ಲಿಂದ ವಾಪಸಾದರು. ಇತ್ತ ಮಗನಿಗೆ ಮದುವೆ ಮಾಡಲು ಕುಟುಂಬಸ್ಥರು ಸಂಬಂಧ ಹುಡುಕತೊಡಗಿದರು. ಆದರೆ, ಪ್ರೀತಿಯ ವಿಚಾರದಲ್ಲಿ ಇನ್ನು ತಡ ಮಾಡಬಾರದು ಎಂದು ಯೋಚಿಸಿದ ಶ್ರೀನಿವಾಸ್, ತನ್ನ ವಿಚಾರವನ್ನೆಲ್ಲ ಹಿರಿಯರಿಗೆ ಹೇಳಿದ್ದಾನೆ. ನಾನು ಹುಡುಗಿಯನ್ನು ಪ್ರೀತಿಸುತ್ತಿಲ್ಲ ಬದಲಾಗಿ ತೃತೀಯಲಿಂಗಿಯನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದಾಗ ಕುಟುಂಬಸ್ಥರೇ ಒಂದು ಕ್ಷಣ ಬೆಚ್ಚಿಬಿದ್ದರು. ಆದರೂ ಮಗನ ಆಸೆಗೆ ಇಲ್ಲ ಎನ್ನಬಾರದು ಅಂತ ಒಲ್ಲದ ಮನಸ್ಸಿನಿಂದ ಈ ಮದುವೆಗೆ ಒಪ್ಪಿಗೆ ಸೂಚಿಸಿದರು. ಪ್ರೀತಿಗೆ ಲಿಂಗ ಅಡ್ಡಿಯಲ್ಲ ಎಂದು ಶ್ರೀನಿವಾಸ್ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು. ಇದಾದ ಬಳಿಕ ಶ್ರೀನಿವಾಸ್ ಮತ್ತು ಕರುಣಾಂಜಲಿ ಮದುವೆ ಸಂಬಂಧಿಕರ ಸಮ್ಮುಖದಲ್ಲಿ ನೆರವೇರಿತು. ಇಬ್ಬರ ಮದುವೆ ಸಾಮಾನ್ಯ ಮದುವೆಯಂತೆಯೇ ಅದ್ಧೂರಿಯಾಗಿ ನೆರವೇರಿತು. ಈ ಮದುವೆಗೆ ಶ್ರೀನಿವಾಸ್​ ಸಂಬಂಧಿಕರೆಲ್ಲರು ಹಾಜರಾಗಿದ್ದರು. ಕರುಣಾಂಜಲಿಯ ಪರವಾಗಿ ತೃತೀಯಲಿಂಗಿಗಳು ಹಾಜರಿದ್ದರು. ಸಮಾಜದಲ್ಲಿ ಕಿರುಕುಳ ಅನುಭವಿಸಿ ಕೀಳಾಗಿ ಕಾಣುವ ತೃತೀಯಲಿಂಗಿಯನ್ನು ಮದುವೆಯಾದ ಶ್ರೀನಿವಾಸ್ ಅವರನ್ನು ಹಲವರು ಶ್ಲಾಘಿಸುತ್ತಿದ್ದಾರೆ. ಈ ಮದುವೆ ಕುರಿತು ನಿಮ್ಮ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

Leave a Reply

Your email address will not be published. Required fields are marked *