ನಿಮ್ಮ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ, ಪೋಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ– ಜ್ಯೋತಿ ಕೆ.ವಿ
ಜೀವನ ಅತ್ಯಂತ ಅಮೂಲ್ಯವಾದುದು. ಕೆಟ್ಟ ಚಟಗಳಿಗೆ ಬಲಿಬೀಳದೇ ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ನಮಗಾಗಿ ಜೀವನ ಸವೆಸುವ ಮನೆಯ ಸದಸ್ಯರನ್ನು ನೆನಪು ಮಾಡಿಕೊಳ್ಳಬೇಕು. ಹಾಗೆಯೇ ದ್ವಿಚಕ್ರ ಸವಾರರು ನಿಮ್ಮ ರಕ್ಷಣೆಗಾಗಿ ಹೆಲ್ಮೆಟ್ ಬಳಸಿ, ಪೋಲೀಸರಿಗಾಗಿ ಹೆಲ್ಮೆಟ್ ಧರಿಸಬೇಡಿ ಎಂದು ಸುಳ್ಯ ಆರಕ್ಷಕ ಠಾಣೆಯ ಪೋಲಿಸ್ ಕಾನ್ಸ್ಟೇಬಲ್ ಜ್ಯೋತಿ ಕೆ ವಿ ಕಿವಿ ಮಾತು ಹೇಳಿದರು. ಅವರು ಸುಳ್ಯದ ನೆಹರೂ ಮೆಮೊರೀಯಲ್ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದವರು ಹಮ್ಮಿಕೊಂಡ “ರಸ್ತೆ ಸುರಕ್ಷತಾ ಮತ್ತು ಮಾದಕ ವ್ಯಸನ ಜಾಗೃತಿ ಮಾಹಿತಿ ಕಾರ್ಯಾಗಾರ” ದಲ್ಲಿ ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಹೇಮನಾಥ್ ಕೆ ವಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ ಎಂ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್, ಪೊಲೀಸ್ ಕಾನ್ ಸ್ಟೇಬಲ್ ದಿನೇಶ್, ಯುವ ರೆಡ್ ಕ್ರಾಸ್ ಘಟಕದ ನಾಯಕ ಷಣ್ಮುಖ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕ ನಾಯಕಿ ದೀಕ್ಷಾ ಎನ್ ಆರ್ ಸ್ವಾಗತಿಸಿ, ಸದಸ್ಯರಾದ ಪವನ್ ವಂದಿಸಿ, ರಿಷಿತಾ ಎ ಕಾರ್ಯಕ್ರಮ ನಿರೂಪಿಸಿದರು.
ರೆಡ್ ಕ್ರಾಸ್ ಸದಸ್ಯರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.