ಕೃಷಿ ಸಾಧಕರ ಪರಿಚಯ ಮತ್ತು ಸಂದರ್ಶನ
ಸುಳ್ಯ ; ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯ ಕಲಿಯುತ್ತಿರುವ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಅಕ್ಟೋಬರ್ 25 ಶುಕ್ರವಾರದಂದು ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಏರ್ಪಡಿಸಿ ಸುಳ್ಯ ಪರಿಸರದ ಕೆಲವು ಕೃಷಿ ಸಾಧಕರನ್ನು ಸಂದರ್ಶಿಸಿ, ಕೃಷಿ ಕ್ಷೇತ್ರ ವೀಕ್ಷಿಸಿ, ಅಲ್ಲಿನ ವಿಶೇಷತೆಗಳನ್ನು ಅವರ ಕೃಷಿ ಸಾಧನೆಗಳನ್ನು ಪರಿಚಯಿಸಿ ಕೊಡಲಾಯಿತು.
ಕೃಷಿ ಕ್ಷೇತ್ರ ಅಧ್ಯಯನದಲ್ಲಿ ಬೆಳಿಗ್ಗೆ ಚೊಕ್ಕಾಡಿ ಅಜ್ಜನಗದ್ದೆ ಸಮೀಪ ಚಂದ್ರಶೇಖರ್ ಸುಬ್ಬಯ್ಯಮೂಲೆಯವರ ಮನೆಗೆ ಭೇಟಿ ನೀಡಿ ತರಕಾರಿ ಕೃಷಿ ಬಗ್ಗೆ ಮಾಹಿತಿ ಪಡೆದು ಕೊಳ್ಳಲಾಯಿತು. ಇಲ್ಲಿ ರಬ್ಬರ್ ಗಿಡಗಳನ್ನು ಕಡಿದು ಆಧುನಿಕ ವಿಧಾನದಲ್ಲಿ ಇಸ್ರೇಲ್ ಮಾದರಿ ಕೃಷಿ ಕೈಗೊಂಡಿದ್ದು ಬೆಂಡೆಕಾಯಿ, ಸೌತೆಕಾಯಿ, ಟೊಮೆಟೊ ಇತ್ಯಾದಿ ತರಕಾರಿಗಳನ್ನು ಬೆಳೆಸುತ್ತಿದ್ದು ಇದಕ್ಕೆ ಬೇಕಾದ ಅಗತ್ಯ ಪರಿಕರಗಳು, ನಿರ್ವಹಿಸುವ ವಿಧಾನಗಳು ಮತ್ತು ಮುಂಜಾಗ್ರತಾ ಕ್ರಮಗಳು, ಮಾರುಕಟ್ಟೆ ಅವಕಾಶಗಳ ಬಗ್ಗೆ ವಿವರಿಸಿದರು.
ಮದ್ಯಾಹ್ನ ಬೆಳ್ಳಾರೆಯ ಕುರಿಯಾಜೆ ತಿರುಮಲೇಶ್ವರ ಭಟ್ ಭೇಟಿಯಾಗಿ ಅವರು ಬೆಳೆದಿರುವ ಹಲವು ದೇಶ ವಿದೇಶಿ ಹಣ್ಣಿನ ಗಿಡಗಳ ಬಗ್ಗೆ ತಿಳಿದುಕೊಂಡು ಪುಂಗನೂರು ತಳಿಯ ದನ, ಮನೆಯಂಗಳದಲ್ಲಿ ನಿರ್ಮಿಸಿದ ಅದ್ಬುತವಾದ ಉದ್ಯಾನವನವನ್ನು ವೀಕ್ಷಿಸಲಾಯಿತು.
ಅಪರಾಹ್ನ ಐವರನಾಡು ಗ್ರಾಮದ ಪದ್ಮ ಕೋಲ್ಚರ್ ರನ್ನು ಭೇಟಿಯಾಗಿ ನೈಸರ್ಗಿಕ ಕೃಷಿ ವಿಧಾನದ ಬಗ್ಗೆ ಸಮಗ್ರ ವಿವರ ಪಡೆದುಕೊಂಡು ಅವರ ವಿನೂತನ ಕೃಷಿ ಪ್ರಯೋಗಗಳು, ನೀರಿನ ಸಂರಕ್ಷಣೆಯ ಮಾದರಿ, ಜೀವಮೃತ ತಯಾರಿ, ಸುಭಾಷ್ ಪಾಳೇಕಾರ್ ಪದ್ಧತಿಯಲ್ಲಿ ಕೃಷಿ ಪ್ರಾರಂಭ ಮತ್ತು ನಿರ್ವಹಣೆ ಹಾಗೂ ಸರಾಸರಿ ಲಾಭಾಂಶದ ವಿವರಣೆ ಪಡೆದುಕೊಳ್ಳಲಾಯಿತು.
ಅಧ್ಯಯನ ಪ್ರವಾಸದಲ್ಲಿ ಭೇಟಿ ನೀಡಿದ ಎಲ್ಲ ಕೃಷಿ ಸಾಧಕರಿಗೆ ಸ್ಮರಣಿಕೆಯಾಗಿ ಗಿಡಗಳನ್ನು ನೀಡಿ ಗೌರವಿಸಲಾಯಿತು. ಈ ಶಿಬಿರದ ನೇತೃತ್ವವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಅಕ್ಷತಾ ಬಿ, ಕೃತಿಕಾ ಕೆ ಜೆ ಮತ್ತು ಅಜಿತ್ ಕುಮಾರ್ ವಹಿಸಿದ್ದರು. ಕಾಲೇಜು ಸಿಬ್ಬಂದಿ ಭವ್ಯ ಮತ್ತು ಪೂವಪ್ಪ ಸಹಕರಿಸಿದರು.