ಸಬ್ ಇನ್ಸ್ಪೆಕ್ಟರ್ ಎಂದು ಹೇಳಿಕೊಂಡು ಪೊಲೀಸ್ ಸಮವಸ್ತ್ರದಲ್ಲಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ಗೆ ಆಗಮಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಬಂಧಿತ ಯುವತಿಯನ್ನು ಅಭಿಪ್ರಭಾ (34) ಎಂದು ಗುರುತಿಸಲಾಗಿದೆ.
ಈಕೆ ಥೇನಿ ಪೆರಿಯಕುಲಂ ಮೂಲದ ನಿವಾಸಿ. ಪಾರ್ವತಿಪುರಂ ಮೂಲದ ವೆಂಕಟೇಶ್ ಎಂಬುವವರ ನೀಡಿದ ದೂರಿನ ಮೇರೆಗೆ ವಡಸೇರಿ ಪೊಲೀಸರು ಅಭಿಪ್ರಭಾಳನ್ನು ಬಂಧಿಸಿದ್ದಾರೆ. ವಂಚನೆ ಮತ್ತು ಪೊಲೀಸರ ಸೋಗು ಹಾಕಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ.
ನಾಗರಕೋಯಿಲ್ನಲ್ಲಿರುವ ಮಹಿಳಾ ಕಾಲೇಜಿಗೆ ಭೇಟಿ ನೀಡಿದ ಬಳಿಕ ವಡಸೇರಿಯಲ್ಲಿರುವ ದೂರುದಾರ ವೆಂಕಟೇಶ್ ಪತ್ನಿಯ ಬ್ಯೂಟಿ ಪಾರ್ಲರ್ಗೆ ಆರೋಪಿ ಅಭಿಪ್ರಭಾ ಭೇಟಿ ನೀಡಿದ್ದಳು. ಫೇಶಿಯಲ್ ಮಾಡಿಸಿಕೊಂಡು ಹಣ ಕೊಡದೆ ಅಲ್ಲಿಂದ ತೆರಳಿದ್ದಳು. ಹಣ ಕೇಳಿದ್ದಕ್ಕೆ ನಾನು ವಡಸೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಂದು ಗದರಿಸಿ ಅಲ್ಲಿಂದ ಹೋಗಿದ್ದಳು. ಆಕೆಯ ವರ್ತನೆಯಿಂದ ಅನುಮಾನಗೊಂಡ ವೆಂಕಟೇಶ್, ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಆಕೆಯನ್ನು ಬಂಧಿಸಲಾಗಿದೆ. ಪೊಲೀಸರ ವಿಚಾರಣೆ ವೇಳೆ ಪೊಲೀಸ್ ವೇಷ ಧರಿಸಿ ಸಾಕಷ್ಟು ಮಂದಿಗೆ ವಂಚನೆ ಮಾಡಿರುವುದಾಗಿ ಅಭಿಪ್ರಭಾ ತಪ್ಪೊಪ್ಪಿಕೊಂಡಿದ್ದಾಳೆ. ಈ ಅಭಿಪ್ರಭಾ ತೇಣಿ ಜಿಲ್ಲೆಯ ಪೆರಿಯಾಕುಲಂ ಬಳಿಯ ವಡುಗಪಟ್ಟಿ ಮೂಲದವಳು ಎಂಬುದು ಪೊಲೀಸರ ವಿಚಾರಣೆಗೆ ವೇಳೆ ತಿಳಿದುಬಂದಿದೆ. ಈಕೆ ಸುಮಾರು 13 ವರ್ಷಗಳ ಹಿಂದೆ ಮುರುಗನ್ ಎಂಬಾತನ್ನು ಮದುವೆಯಾಗಿದ್ದಳು. ಅವರಿಗೆ ಒಬ್ಬ ಮಗನಿದ್ದಾನೆ. ಆದರೆ, ಭಿನ್ನಾಭಿಪ್ರಾಯದಿಂದ ಮದುವೆಯಾಗಿ ಆರು ವರ್ಷಗಳ ಬಳಿಕ ಮುರುಗನ್ ನಿಂದ ಅಭಿಪ್ರಭಾ ಡಿವೋರ್ಸ್ ಪಡೆದು, ಚೆನ್ನೈಗೆ ತೆರಳಿದ್ದಳು.
ಚೆನ್ನೈನಲ್ಲಿ ಖಾಸಗಿ ಜವಳಿ ಶೋರೂಂನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಹುಡುಕುವಲ್ಲಿ ಯಶಸ್ವಿಯಾದ ಪ್ರಭಾ, ಪೃಥ್ವಿರಾಜ್ ಎಂಬಾತನೊಂದಿಗೆ ಸ್ನೇಹ ಬೆಳೆಸಿಕೊಂಡಳು. ಮೂರು ತಿಂಗಳ ಹಿಂದೆ ತನ್ನ ಸ್ನೇಹಿತೆಯ ಮದುವೆಗೆ ಹಾಜರಾಗಲು ಪೃಥ್ವಿರಾಜ್ ಜತೆ ಚೆನ್ನೈನಿಂದ ತಿರುವನಂತಪುರಕ್ಕೆ ರೈಲಿನಲ್ಲಿ ಪ್ರಯಾಣಿಸುವಾಗ ಆತನ ಬಳಿ ಮದುವೆ ಆಗುವ ಬಯಕೆ ವ್ಯಕ್ತಪಡಿಸಿದ್ದಾಳೆ. ತನ್ನ ಹೆತ್ತವರು ಪೊಲೀಸ್ ಅಧಿಕಾರಿಯಾಗಿರುವ ಮಹಿಳೆಯನ್ನು ಮದುವೆಯಾಗಲು ಬಯಸಿದ್ದಾರೆ ಎಂದು ಪೃಥ್ವಿರಾಜ್ ಹೇಳುತ್ತಾನೆ.
ಇದಾದ ಬಳಿಕ ಅಭಿಪ್ರಭಾ ಪೃಥ್ವಿರಾಜ್ ಸಹಾಯದಿಂದ ಪೊಲೀಸ್ ಸಮವಸ್ತ್ರ ಧರಿಸಿ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಮಹಿಳಾ ಎಸ್‌ಐ ವೇಷದಲ್ಲಿ ಚೆನ್ನೈ, ತಿರುನಲ್ವೇಲಿ ಮತ್ತು ಇತರ ನಗರಗಳಲ್ಲಿ ಅಭಿಪ್ರಭಾ ಸುತ್ತಾಡಿದ್ದಾರೆ. ಈ ವೇಳೆ ಸಾಕಷ್ಟು ಮಂದಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್ ಫೋನ್‌ನ ಪರಿಶೀಲನೆ ಮಾಡಿದಾಗ ವಿವಿಧ ನಗರಗಳಲ್ಲಿ ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ವಿಭಿನ್ನ ಚಿತ್ರಗಳನ್ನು ಸೆರೆಹಿಡಿದಿರುವುದು ಕಂಡುಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್