ಆರಂಭಿಕ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಸಿಡಿಲಬ್ಬರದ ಆಟದಿಂದ ಭಾರತ ತಂಡ ನಾಲ್ಕನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 283 ರನ್ ಗಳ ಬೃಹತ್ ಮೊತ್ತ ಪೇರಿಸಿದೆ. ಜೊಹಾನ್ಸ್ ಬರ್ಗ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 283 ರನ್ ದಾಖಲಿಸಿತು.

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಮೊದಲ ವಿಕೆಟ್ ಗೆ 73 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಅಭಿಷೇಕ್ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 36 ರನ್ ಸಿಡಿಸಿ ಔಟಾದರು.

ನಂತರ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ 2ನೇ ವಿಕೆಟ್ ಗೆ ದ್ವಿಶತಕದ ದಾಖಲೆ ಮೊತ್ತದ ಜೊತೆಯಾಟದಿಂದ ಬೃಹತ್ ಮೊತ್ತ ಪೇರಿಸಲು ನೆರವಾದರು. ದಕ್ಷಿಣ ಆಫ್ರಿಕಾ ಆಟಗಾರರ ಕಳಪೆ ಕ್ಷೇತ್ರರಕ್ಷಣೆ ಲಾಭ ಪಡೆದು ಅಬ್ಬರಿಸಿ ಬೊಬ್ಬಿರಿದ ಇಬ್ಬರೂ ವೈಯಕ್ತಿಕ ಶತಕಗಳನ್ನು ದಾಖಲಿಸಿದರು.

ಸಂಜು ಸ್ಯಾಮ್ಸನ್ 51 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಕಳೆದ 5 ಇನಿಂಗ್ಸ್ ನಲ್ಲಿ ದಾಖಲಿಸಿದ 3ನೇ ಶತಕವಾಗಿದ್ದರೆ ತಿಲಕ್ ವರ್ಮಾ 41 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ತಿಲಕ್ ವರ್ಮಾಗೆ ಸತತ 2ನೇ ಶತಕವಾಗಿದೆ.

Leave a Reply

Your email address will not be published. Required fields are marked *