ತಮ್ಮ ಮಾತು ಕೇಳದೆ ಪ್ರೀತಿಸಿ ಮದುವೆಯಾದ (Love Marriage) ಕಾರಣಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ತೀವ್ರ ಹಲ್ಲೆ ನಡೆಸಿ ಹತ್ಯೆ (Murder Case) ಮಾಡಿದ್ದು, ಈ ಪ್ರಕರಣದಲ್ಲಿ ಅನೇಕ ವಿಷಯಗಳು ಇದೀಗ ಹೊರಗೆ ಬರುತ್ತಿವೆ. ಈ ಯುವಕನ ಮೇಲೂ ಗಂಭೀರ ಆರೋಪವಿದ್ದು, ಜೈಲು ಶಿಕ್ಷೆಗೆ ಒಳಗಾಗಿದ್ದ ಎಂದು ಗೊತ್ತಾಗಿದೆ.
“ನನಗೆ ನೀನೇ ಬೇಕು” ಎಂದು ಯುವತಿಯೇ ಹಠ ಹಿಡಿದು ಈತನನ್ನು ಮದುವೆಯಾಗಿದ್ದು, ಆ ಕುರಿತ ಆಡಿಯೋ (Viral Audio) ಕೂಡ ಲಭ್ಯವಾಗಿದೆ.
ಈ ಘಟನೆ ಚಿತ್ರದುರ್ಗ (Chitradurga crime news) ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡು ಮೃತಪಟ್ಟವನು ಮಂಜುನಾಥ (42). ಈತನ ಪತ್ನಿ ರಕ್ಷಿತಾ (19). ಮಂಜುನಾಥ ಮತ್ತು ರಕ್ಷಿತ ಪ್ರೀತಿಸಿ 3 ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಇವರ ಮದುವೆಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆಗೂ ಮುನ್ನ ಯುವಕನ ಬಳಿ ಯುವತಿ ಹಠ ಹಿಡಿದಿದ್ದ ಆಡಿಯೋ ಇದೀಗ ಲಭ್ಯವಾಗಿದೆ.
ನಿನ್ನೆ ಮಧ್ಯಾಹ್ನ ಊರಿಗೆ ಬಂದಿದ್ದ ಮಂಜುನಾಥನ ಮೇಲೆ ಯುವತಿಯ ತಂದೆ ತಾಯಿ ಹಾಗೂ ಸಂಬಂಧಿಗಳು ಸೇರಿ 20ಕ್ಕೂ ಹೆಚ್ಚು ಜನ ಸೇರಿ ಸೈಜ್ ಕಲ್ಲು, ದೊಣ್ಣೆ, ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ರಕ್ಷಿತಾ ತಂದೆ ಜಗದೀಶ್, ಸಂಬಂಧಿಗಳಾದ ಕಲ್ಲೇಶ್, ಈಶ್ವರಪ್ಪ, ನಿಂಗಪ್ಪ, ವಿಶ್ವನಾಥ್, ಹರೀಶ್ ಸೇರಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆಯ ವೇಳೆ ಮಂಜುನಾಥನ ತಂದೆ ಚಂದ್ರಪ್ಪ, ತಾಯಿ ಅನುಸೂಯಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೂ ಮುನ್ನ ಅದ್ದೂರಿ ಮದುವೆ ಮಾಡುವುದಾಗಿ ಯುವತಿಯ ಪೋಷಕರು ತಮ್ಮ ಮಗಳನ್ನು ಕರೆದೊಯ್ದಿದ್ದರು. ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಮದುವೆ ಬಳಿಕ ಮಂಜುನಾಥ ಗ್ರಾಮಕ್ಕೆ ಮೊದಲ ಬಾರಿಗೆ ಬಂದಿದ್ದ. ಮಂಜುನಾಥ ಗ್ರಾಮಕ್ಕೆ ಬರುತ್ತಿದ್ದಂತೆ ರಕ್ಷಿತಾ ಕುಟುಂಬಸ್ಥರಿಂದ ಹಲ್ಲೆ ನಡೆದಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ ಮೃತಪಟ್ಟಿದ್ದಾನೆ.
ಆಡಿಯೋ ವೈರಲ್
ಮಂಜುನಾಥ ಬೇಡ ಅಂದ್ರೂ ರಕ್ಷಿತಾ ಕಾಲ್ ಮಾಡಿ ನೀನೇ ಬೇಕು ಎನ್ನುತ್ತಿದ್ದಳು. ಆದರೆ ಮಂಜುನಾಥ, ಕೊಟ್ಟ ಕಡೆ ಮದುವೆಯಾಗಿ ಚೆನ್ನಾಗಿ ಇರೋದು ಕಲಿ ಎಂದು ಬುದ್ದಿವಾದ ಹೇಳಿದ್ದಾನೆ. ಎಷ್ಟೇ ಬುದ್ದಿವಾದ ಹೇಳಿದ್ರೂ ನನಗೆ ನೀನೇ ಬೇಕು ಎಂದು ರಕ್ಷಿತಾ ಪಟ್ಟು ಹಿಡಿದಿದ್ದಾಳೆ.
ನನಗೆ ಇಲ್ಲಿರಕ್ಕಾಗ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗು. ನೀನಿಲ್ಲದೇ ಒಂದು ಕ್ಷಣ ಇರಕ್ಕಾಗಲ್ಲ, ಬಾ ಹೋಗೋಣ ಎಂದು ರಕ್ಷಿತಾ ಗೋಗರೆದಿದ್ದಳು. ಅದಕ್ಕೆ ಮಂಜುನಾಥ ತನ್ನ ಹಿಂದಿನ ಕತೆಯನ್ನು ಪ್ರಸ್ತಾಪಿಸಿ, ನಾನು ಮಾಡಿರೋದೆಲ್ಲ ಗೊತ್ತಿದ್ರೂ ನಾನೇ ಬೇಕು ಅಂತೀಯಲ್ಲಾ ಎನ್ನುತ್ತಾನೆ. ಯುವತಿ ಮಾತ್ರ, ನನಗೆ ಗೊತ್ತಿಲ್ಲ, ನೀನು ಬೇಕು ಅಷ್ಟೇ ಎನ್ನುತ್ತಾಳೆ.
ಎಲ್ಲರಿಗೂ ಉತ್ತರ ಕೊಡಬೇಕಲ್ಲಾ ಎಂಬ ಮಂಜುನಾಥನ ಪ್ರಶ್ನೆಗೆ, ನೀನಿಲ್ಲದಿದ್ರೆ ಏನಾದ್ರೂ ಕುಡಿದು ಸತ್ತೋಗ್ತೀನಿ. ಜನ ಸಾವಿರ ಮಾತಾಡ್ಲಿ ನನಗೆ ನೀನೇ ಬೇಕು ಎಂದು ರಕ್ಷಿತಾ ಹಠ ಮಾಡಿದ್ದಾಳೆ. ನಿನಗೆ ಎಂಥವ್ರು ಬೇಕಾದ್ರೂ ಸಿಗ್ತಾರೆ, ನಾನೇ ಯಾಕೆ ಬೇಕು ಎಂದು ಮಂಜುನಾಥ ಪ್ರಶ್ನೆ ಮಾಡಿದ್ದಾನೆ. ನಿನ್ನನ್ನು ಬಿಟ್ಟು ಒಂದು ಕ್ಷಣ ಇರಲ್ಲ. ನೀನಿಲ್ಲಾ ಅಂದ್ರೆ ವಿಷ ಕುಡಿದು ಸತ್ತೋಗ್ಬಿಡ್ತೀನಿ. ನಮ್ಮಪ್ಪ ಅಮ್ಮನ್ ಕಷ್ಟ ನೋಡ್ಬೇಕು ಎಂದು ರಕ್ಷಿತಾ ಹಠ ಹಿಡಿದಿದ್ದಾಳೆ.
ನಿಮ್ಮನೆಯವ್ರು ಸುಮ್ನೆ ಬಿಡ್ತಾರಾ ನಮ್ಮನ್ನು ಎಂದು ಮಂಜುನಾಥ ಕೇಳಿದ್ದಕ್ಕೆ, ಅವ್ರು ಏನ್ ಮಾಡ್ತಾರೋ ನೋಡೋಣ ಎನ್ನುತ್ತಾಳೆ. ಆಗ ಮಂಜುನಾಥ, ನನಗೆ ಬೇಡ, ಫೋನ್ ಮಾಡ್ಲೇ ಬೇಡ ಎಂದು ಕಾಲ್ ಕಟ್ ಮಾಡುತ್ತಾನೆ. ಬಳಿಕ ಮಂಜುನಾಥ ಮತ್ತು ರಕ್ಷಿತಾ ಮದುವೆ ಆಗಿದ್ದಾರೆ. ಮದುವೆಗೆ ಮುಂಚಿತವಾಗಿ ಇವರಿಬ್ಬರು ಮಾತನಾಡಿದ ಆಡಿಯೋ ಈಗ ವೈರಲ್ ಆಗಿದೆ.