ಮಂಗಳೂರು: ತನಗೆ ಸಹಾಯ ಮಾಡಲು ಬಂದಿದ್ದವನು ಅಮಲು ಬರಿಸುವ ಜ್ಯೂಸ್ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಯುವತಿಯೋರ್ವಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿವರಗಳ ಪ್ರಕಾರ ಜುಲೈ 21 ರಂದು ಯುವತಿಯ ಕಾರು ಕದ್ರಿಯಲ್ಲಿ ಕೆಟ್ಟು ನಿಂತಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿದ್ದ. ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲಬೈಲಿನ ಅಪಾರ್ಟ್ಮೆಂಟ್‌ಗೆ ಡ್ರಾಪ್ ಮಾಡಿದ್ದಾನೆ. ಈ ವೇಳೆ ಹುಡುಗಿಯ ಮೊಬೈಲ್ ನಂಬರ್ ಪಡೆದಿದ್ದ. ಇನ್ನು ಆಕೆ ಕೊಡಿಯಾಲಬೈಲ್‌ನ ಅಪಾರ್ಟ್ಮೆಂಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಳು.
ಆಗಸ್ಟ್ 8 ರಂದು ಯುವತಿ ತಮ್ಮ ಮನೆಯ ಫ್ರಿಡ್ಜ್ ಕೆಟ್ಟು ಹೋಗಿತ್ತು. ಸಹಾಯಕ್ಕಾಗಿ ಶಫೀನ್‌ಗೆ ಕರೆ ಮಾಡಿದ್ದಾಳೆ. ಆತ ರಿಪೇರಿಯವರನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿದ್ದ. ಬಳಿಕ ಶಫೀನ್ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಈ ಜ್ಯೂಸ್ ಕುಡಿಯುತ್ತಿದ್ದಂತೆ ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ನಂತರ ಎಚ್ಚರಗೊಂಡ ಯುವತಿ ಅನುಮಾನಗೊಂಡು ವಿಚಾರಿಸಿದಾಗ ತಾನು ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದಾನೆ. ಜೊತೆಗೆ ವಿಡಿಯೋ ಮಾಡಿದ್ದು, ಮುಂದೆ ಸಹಕಾರ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಈ ವೇಳೆಯಲ್ಲಿ ಆಕೆಯ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ.
ಸಂತ್ರಸ್ತ ಯುವತಿ ಕಾರನ್ನು ವಾಪಾಸ್ ಪಡೆಯಲು ಆಗಸ್ಟ್ 25 ರಂದು ದೇರಳಕಟ್ಟೆಯ ಅಪಾರ್ಟ್ಮೆಂಟ್‌ಗೆ ಹೋದಾಗ ಅಪಾರ್ಟ್ಮೆಂಟ್ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿರುವುದು ಪತ್ತೆಯಾಗಿದೆ. ಬಳಿಕ ಯುವತಿ ವಾಚ್ ಮ್ಯಾನ್‌ನಿಂದ ಅಪಾರ್ಟ್ಮೆಂಟ್ ನ ನಂಬರ್ ಪಡೆದು ಆರೋಪಿ ಶಫೀನ್ ಮನೆಗೆ ತೆರಳಿದ್ದಾಳೆ. ಈ ವೇಳೆ ತನ್ನ ಕಾರನ್ನು ಹಿಂತಿರುಗಿಸುವಂತೆ ಮನವಿ ಮಾಡಿದ ಆಕೆಯ ಮೇಲೆ ಆರೋಪಿ ಶಫೀನ್ ಹಿರಿಯ ಸಹೋದರ ಮೊಹಮ್ಮದ್ ಶಿಯಾಬ್ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದು, ಜೀವ ಬೆದರಿಕೆ ಹಾಕಿದ್ದಾನೆ. ಶಿಯಾಬ್ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ. ಆಗಸ್ಟ್ 27 ರಂದು ರಾತ್ರಿ 9 ಗಂಟೆ ಸುಮಾರಿಗೆ ಸಂತ್ರಸ್ತ ಯುವತಿಯ ಮನೆಗೆ ನುಗ್ಗಿದ ಶಫೀನ್ ಆಕೆಯ ಬ್ಯಾಗ್‌ನಲ್ಲಿದ್ದ 62,000 ರೂ. ಕಳ್ಳತನ ಮಾಡಿದ್ದಾನೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಆರೋಪಿಯ ಹಿರಿಯ ಸಹೋರನ ಪತ್ನಿ ಸಂತ್ರಸ್ತೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಕಾರಣ ಆಕೆಯ ವಿರುದ್ಧವೂ ಮತ್ತೊಂದು ದೂರು ದಾಖಲಿಸಿದ್ದಾರೆ. ಇದೇ ವೇಳೆ ಆರೋಪಿಗಳಾದ ಶಫೀನ್ ಹಾಗೂ ಸಹೋದರ ಶಿಯಾಬ್ ವಿದೇಶಕ್ಕೆ ಪರಾರಿಯಾಗಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.