ಪುತ್ತೂರು ಡಿಸೆಂಬರ್ 21: ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಕ್ರಿಮಿನಲ್ ಹಿನ್ನಲೆಯಲ್ಲಿನ ವ್ಯಕ್ತಿಗೆ ದೇಶದ ಗೃಹ ಖಾತೆಯನ್ನು ನೀಡಿರುವುದು ದೇಶ ಕಂಡ ದುರಂತ. ಸಂವಿಧಾನ ವಿರೋಧಿ ಚಿಂತನೆಯ ಕೇಂದ್ರ ಗೃಹ ಸಚಿವ ಅಮಿತ್ ಶಾ ತಕ್ಷಣವೇ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ. ಎ. ಸಿದ್ದೀಕ್ ಆಗ್ರಹಿಸಿದರು. ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಗರ ಸಮಿತಿ ವತಿಯಿಂದ ಶನಿವಾರ ಸಂಜೆ ನಗರದ ದರ್ಬೆಯಲ್ಲಿ ಡಾ. ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದರು. ತನ್ನ ಸಂವಿಧಾನ ಮೂಲಕ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದ ಡಾ. ಅಂಬೇಡ್ಕರ್ ಬಗ್ಗೆ ಫ್ಯಾಸಿಸ್ಟ್ ಶಕ್ತಿಗಳಿಗೆ ಬಹಳಷ್ಟು ಕೋಪವಿದೆ. ಆದರೆ ಅಂಬೇಡ್ಕರ್‍ಗೆ ಮಾಡಿರುವ ಅವಮಾನವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ತಕ್ಷಣವೇ ಅಮಿತ್ ಶಾ ಕ್ಷಮೆ ಕೇಳಬೇಕು ಹಾಗೂ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಎಸ್‍ಡಿಪಿಐ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಎಸ್‍ಡಿಪಿಐ ಕ್ಷೇತ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ ಡಾ. ಅಂಬೇಡ್ಕರ್ ಅವರನ್ನು ನಿಂದನೆ ಮಾಡಿರುವುದು ಖಂಡನೀಯವಾಗಿದೆ. ಅಂಬೇಡ್ಕರ್ ಬಗ್ಗೆ ಮನುಸ್ಮøತಿಯ ಆಡಳಿತ ನಡೆಸುತ್ತಿರುವ ಬಿಜೆಪಿಗರಿಗೆ ಹಿಂದಿನಿಂದಲೂ ಆಕ್ರೋಶವಿದೆ. ಜಾತ್ಯಾತೀತ, ಪ್ರಜಾತಂತ್ರ ವ್ಯವಸ್ಥೆಯ ಸಂವಿಧಾನ ತಂದಿರುವ ಡಾ. ಅಂಬೇಡ್ಕರ್ ಅವರ ಸಿದ್ದಾಂತವು ಹಿಂದುತ್ವದ ಅಜೆಂಡಾಕ್ಕೆ ಸರಿಹೊಂದುವುದಿಲ್ಲ ಎಂಬುದು ಅವರ ಕೋಪಕ್ಕೆ ಕಾರಣವಾಗಿದೆ. ಅಮಿತ್ ಶಾ ಹೇಳಿಕೆಯು ಸಂವಿಧಾನವನ್ನು ಸೆದೆ ಬಡಿಯುವ ಪ್ರಯತ್ನವಾಗಿದೆ ಎಂದು ಹೇಳಿದರು.