ಆಯೋಗದಿಂದ ಸಂತ್ರಸ್ತರನ್ನು ಭೇಟಿಯಾಗುವಂತೆ WIM ಒತ್ತಾಯ

ಬೆಂಗಳೂರು : ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಪರ್ಲಿಯಾ ನಿವಾಸಿ ಶಾಹುಲ್ ಹಮೀದ್ ರವರ ಮನೆಗೆ ಬಂಟ್ವಾಳದ ರೌಡಿ ಶೀಟರ್ ಹಸೈನಾರ್ ಮತ್ತು ಹತ್ತಕ್ಕೂ ಹೆಚ್ಚು ಕಿಡಿಗೇಡಿಗಳ ತಂಡ ಮಧ್ಯರಾತ್ರಿ ದಾಳಿ ನಡೆಸಿ ಮನೆಯ ಯಜಮಾನ ಮತ್ತು ಗರ್ಭಿಣಿ ಮಹಿಳೆ ಹಾಗೂ ಅಪ್ರಾಪ್ತ ಹುಡುಗಿಯ ಮೇಲೆ ನಡೆದ ದಾಳಿಯಿಂದ ಮನೆಯ ಸದಸ್ಯರು ಗಂಭೀರ ಗಾಯಗೊಂಡಿದ್ದಾರೆ, ಪ್ರಕರಣದ ಆರೋಪಿಗಳ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪೋಕ್ಸೋ, ಕೊಲೆಯತ್ನ ಸೇರಿದಂತೆ ಗಂಭೀರ ಪ್ರಕರಣಗಳು ದಾಖಲಾದರೂ ಪೊಲೀಸರು ಸಂತ್ರಸ್ತ ದೂರುದಾರರ ಮೇಲೆ ಆರೋಪಿಗಳು ದಾಖಲಿಸಿದ ಸುಳ್ಳು ಪ್ರಕರಣದ ಮೇಲೆ ದೂರುದಾರರನ್ನೇ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಘಟನೆಯಿಂದ ಮೊದಲೇ ಆತಂಕದಲ್ಲಿದ್ದಂತಹ ಸಂತ್ರಸ್ತ ಕುಟುಂಬದ ಮಹಿಳೆಯರು ಮಕ್ಕಳು ತನ್ನ ಮನೆಯ ಯಜಮಾನನನ್ನೇ ಪೊಲೀಸರು ಸುಳ್ಳು ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿ ಸಿರುವುದರಿಂದ ಇನ್ನಷ್ಟು ಆತಂಕ ಮತ್ತು ಭಯದಿಂದ ದಿನದೂಡುತ್ತಿದ್ದಾರೆ. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಪ್ರಕರಣದ ಆರೋಪಿಗಳು ಕಾನೂನು ಬಾಹಿರ ಅಕ್ರಮ ವ್ಯವಹಾರ ನಡೆಸುವ ಕ್ರಿಮಿನಲ್ ಮತ್ತು ರೌಡಿ ಶೀಟರ್ ಗಳಾಗಿದ್ದು ರಾಜಕೀಯ ಪ್ರಭಾವ ಹೊಂದಿದ್ದಾರೆ,

ಆದ್ದರಿಂದ ಮಹಿಳೆಯ ಸುರಕ್ಷೆ ಮತ್ತು ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಇಂದು WIM ರಾಜ್ಯ ಉಪಾಧ್ಯಕ್ಷೆ ಶಾಝಿಯ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾಕ್ಟರ್ ನಾಗಲಕ್ಷ್ಮಿ ಚೌದರಿಯನ್ನು ಭೇಟಿಯಾಗಿ ಗರ್ಭಿಣಿ ಮತ್ತು ಅಪ್ರಾಪ್ತ ಮಹಿಳೆಯರ ಮೇಲಿನ ದಾಳಿಯ ಬಗ್ಗೆ ದೂರು ನೀಡಿದ್ದಾರೆ, ಮಹಿಳಾ ಆಯೋಗವು ಘಟನೆಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸತ್ಯಾಸತ್ಯತೆ ತಿಳಿಯಬೇಕು, ಭಯ ಮತ್ತು ಆತಂಕದಿಂದ ಇರುವ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಬೇಕು ಹಾಗೂ ಪ್ರಕರಣದ ಆರೋಪಿಗಳ ಹಿನ್ನಲೆ ಮತ್ತು ಪ್ರಸ್ತುತ ಘಟನೆಯ ಮಾಹಿತಿಯನ್ನು ಕಲೆಹಾಕಿ ಎಲ್ಲಾ ಆರೋಪಿಗಳನ್ನು ಕಠಿಣ ಕಾನೂನಿನಡಿ ಬಂಧಿಸಬೇಕು ಮತ್ತು ಸಂತ್ರಸ್ತ ಕುಟುಂಬದ ಮೇಲೆ ದಾಖಲಾದ ಸುಳ್ಳು ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಗೆ ಆಯೋಗವು ನಿರ್ದೇಶನ ನೀಡಬೇಕು, ಗರ್ಭಿಣಿ ಮಹಿಳೆ ಅಪ್ರಾಪ್ತೆಯ ಮೇಲೆ ಇಂತಹ ದಾಳಿಗಳು ಮುಂದಿನ ದಿನಗಳಲ್ಲಿ ನಡೆಯದೇ ಇರಲು ಮಹಿಳಾ ಆಯೋಗ ಪೊಲೀಸ್ ಇಲಾಖೆಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಬೇಕೆಂದು ವಿಮೆನ್ ಇಂಡಿಯಾ ಮೂವ್ ಮೆಂಟ್ ತನ್ನ ದೂರಿನಲ್ಲಿ ಒತ್ತಾಯಿಸಿದೆ, ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗದ ಅಧ್ಯಕ್ಷರು ಈ ಘಟನೆಯ ಬಗ್ಗೆ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದೆಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಆಯೋಗದ ಅಧ್ಯಕ್ಷರನ್ನು ಭೇಟಿಯಾದ ನಿಯೋಗದಲ್ಲಿ ವಿಮ್ ರಾಜ್ಯ ಸಮಿತಿ ಸದಸ್ಯೆ ಆಯಿಷಾ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಸುಮಯ್ಯ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *