https://nammasullia.in/

ಗೂನಡ್ಕ: ಪ್ರತಿಷ್ಠಿತ ವಿದ್ಯಾರ್ಥಿ ಯುವಜನ ಸಂಘಟನೆಯಾದ ಎಸ್ಕೆ ಎಸ್‌ಎಸ್‌ಎಫ್ ಗೂನಡ್ಕ ಶಾಖೆಯ ವತಿಯಿಂದ ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬರಾದ ಅಹ್ಮದ್ ನ‌ಈಂ ಫೈಝಿ ಅಲ್ ಮ‌ಅಬರಿ ಸಂದೇಶ ಭಾಷಣ ನಡೆಸಿ, 1989 ಫೆಬ್ರವರಿ 19 ರಂದು ಎಸ್ಕೆ ಎಸ್‌ಎಸ್‌ಎಫ್ ಸಂಘಟನೆಯು ಅಸ್ತಿತ್ವಕ್ಕೆ ಬಂದಿದ್ದು ಅದರಂತೆ ಪ್ರತಿ ವರ್ಷವೂ ಈ ದಿನದಂದು ಶಾಖಾ ಮಟ್ಟದಲ್ಲಿ ಸ್ಥಾಪನಾ ದಿನ ಆಚರಿಸಲಾಗುತ್ತದೆ. ಈ ವಿದ್ಯಾರ್ಥಿ ಯುವಜನ ಸಂಘಟನೆಯು ಹದಿನೆಂಟು ಉಪ ಸಮಿತಿಗಳ ಮೂಲಕ ಸಮಾಜದ ಎಲ್ಲಾ ಸ್ತರದ ಜನರಿಗೂ ಉಪಕಾರಿಯಾಗುವ ಸಾಮಾಜಿಕ ಶೈಕ್ಷಣಿಕ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಗಮನ ಹರಿಸಿ ಅನೇಕ ಸರ್ಕಾರಿ ಅಧಿಕಾರಿಗಳನ್ನು ಸಮರ್ಪಿಸಿದೆ ಎಂದು ಸಂದೇಶ ನೀಡಿದರು. ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ, ಎಸ್ಕೆ ಎಸ್‌ಎಸ್‌ಎಫ್ ಸಮಿತಿಯ ಮೂಲಕ ಸಮುದಾಯ ಮತ್ತು ಸಮಾಜಕ್ಕೆ ಇನ್ನಷ್ಟು ವ್ಯವಸ್ಥಿತವಾಗಿ ಸೇವೆ ಸಲ್ಲಿಸಲು ಕಾರ್ಯಕರ್ತರಿಗೆ ಸಾಧ್ಯವಾಗಲಿ ಎಂದು ಶುಭ ಹಾರೈಸಿದರು. ಎಸ್ಕೆ ಎಸ್‌ಎಸ್‌ಎಫ್ ಗೂನಡ್ಕ ಶಾಖೆಯ ಅಧ್ಯಕ್ಷ ಮುನೀರ್ ದಾರಿಮಿ ಗೂನಡ್ಕ ಅಧ್ಯಕ್ಷತೆ ವಹಿಸಿದರು. ಮುಅಝ್ಝಿನ್ ಹಾರಿಸ್ ಕಾಮಿಲ್ ಅಝ್ಹರಿ, ಜಮಾಅತ್ ಸಮಿತಿ ಪ್ರಧಾನ ಕಾರ್ಯದರ್ಶಿ ಉಮರ್ ಪಿ.ಕೆ ಗೂನಡ್ಕ, ಉಪಾಧ್ಯಕ್ಷ ಹನೀಫ ಟಿ.ಬಿ ಗೂನಡ್ಕ, ಕೋಶಾಧಿಕಾರಿ ಮುಹಮ್ಮದ್ ಕುಂಞಿ ತೆಕ್ಕಿಲ್, ಸಂಘಟನೆಯ ಶಾಖಾ ಉಪಾಧ್ಯಕ್ಷ ಸಾದುಮಾನ್ ತೆಕ್ಕಿಲ್, ಶಾಹಿಲ್ ದರ್ಖಾಸ್, ಶಾಖಾ ಸಮಿತಿಯ ಪದಾಧಿಕಾರಿಗಳು ಮತ್ತು ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್ಕೆ ಎಸ್‌ಎಸ್‌ಎಫ್ ಸುಳ್ಯ ವಲಯ ಸಮಿತಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಸ್ವಾಗತಿಸಿ ವಂದಿಸಿದರು. ಧ್ವಜಾರೋಹಣದ ಬಳಿಕ ಖಬರ್ ಝಿಯಾರತ್ ನಡೆಯಿತು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

Leave a Reply

Your email address will not be published. Required fields are marked *