ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ. ಈ ಬಹುಮಾನ ಮೊತ್ತದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತಲಾ 5 ಕೋಟಿ ರೂ. ಸಿಗಲಿದೆ. ಹಾಗೆಯೇ ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ. ನೀಡಲಾಗುತ್ತದೆ.   ಭಾರತ ತಂಡದ ಮೀಸಲು ಆಟಗಾರರಾಗಿ ಕಾಣಿಸಿಕೊಂಡ ಯಶಸ್ವಿ ಜೈಸ್ವಾಲ್, ಖಲೀಲ್ ಅಹ್ಮದ್, ರಿಂಕು ಸಿಂಗ್ ಹಾಗೂ ಅವೇಶ್ ಖಾನ್ಗೂ 1 ಕೋಟಿ ರೂ. ಸಿಗಲಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಬಹುಮಾನ ಮೊತ್ತವನ್ನು ಟೀಮ್ ಇಂಡಿಯಾದ ಸಿಬ್ಬಂದಿಗಳಿಗೆ ನೀಡಲು ಮುಂದಾಗಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿತ್ತು. ಈ ಬಹುಮಾನ ಮೊತ್ತದಲ್ಲಿ ಸಿಬ್ಬಂದಿ ವರ್ಗಗಳಿಗೆ ಉತ್ತಮ ಪಾಲು ಸಿಗಬೇಕೆಂದು ರೋಹಿತ್ ಶರ್ಮಾ ಬಯಸಿದ್ದರು. ಅಲ್ಲದೆ ಕಡಿಮೆ ಮೊತ್ತ ನೀಡಿದರೆ, ತನ್ನದೇ ಬಹುಮಾನ ಮೊತ್ತವನ್ನು ಸಿಬ್ಬಂದಿಗಳಿಗೆ ನೀಡಲು ಹಿಟ್ಮ್ಯಾನ್ ನಿರ್ಧರಿಸಿದ್ದರು ಎಂಬ ವಿಚಾರ ಬಹಿರಂಗವಾಗಿದೆ.

ಟೀಮ್ ಇಂಡಿಯಾಗೆ 125 ಕೋಟಿ ರೂ. ಘೋಷಣೆಯಾದಾಗ ರೋಹಿತ್ ಶರ್ಮಾ ನಮ್ಮ ಪರವಾಗಿ ಧ್ವನಿ ಎತ್ತಿದ್ದರು. ಭಾರತ ತಂಡದ ಸಹಾಯಕ ಸಿಬ್ಬಂದಿಗಳಿಗೆ ಕಡಿಮೆ ಹಣ ನೀಡಬಾರದು ಎಂದಿದ್ದರು. ಅಲ್ಲದೆ ಅವರು ನಮಗಾಗಿ ತಮ್ಮದೇ ಆದ ಬೋನಸ್ ಮೊತ್ತವನ್ನು ತ್ಯಜಿಸಲು ಸಹ ಸಿದ್ಧರಾಗಿದ್ದರು. ಈ ಮೂಲಕ ಅವರಿಗೆ ಸಿಕ್ಕ ಬಹುಮಾನ ಮೊತ್ತವನ್ನು ನಮಗೆ ನೀಡಲು ಮುಂದಾಗಿದ್ದರು ಎಂದು ಹೆಸರು ಹೇಳಲಿಚ್ಛಿಸದ ಭಾರತ ತಂಡದ ಸಹಾಯಕ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 5 ಕೋಟಿ ರೂ. ಬಹುಮಾನ ಮೊತ್ತ ಪಡೆದಿದ್ದಾರೆ. ಒಂದು ವೇಳೆ ಸಹಾಯಕ ಸಿಬ್ಬಂದಿಗಳಿಗೆ ನೀಡಲಾಗುವ ಮೊತ್ತ ಕಡಿಮೆಯಾದರೆ, ತನ್ನ 5 ಕೋಟಿ ರೂ. ಅನ್ನು ಅವರಿಗೆ ನೀಡಲು ಹಿಟ್ಮ್ಯಾನ್ ಸಿದ್ಧರಾಗಿದ್ದರು. ಈ ಮೂಲಕ ಕಳೆದ ಕೆಲ ವರ್ಷಗಳಿಂದ ತೆರೆ ಮರೆಯಲ್ಲೇ ತಂಡದ ಏಳಿಗೆಗೆ ಶ್ರಮಿಸಿದ ಸಿಬ್ಬಂದಿಗಳಿಗೂ ತಕ್ಕ ಪ್ರತಿಫಲ ನೀಡಲು ರೋಹಿತ್ ಶರ್ಮಾ ಬಯಸಿದ್ದರು.

ಹೀಗೆ ಬಿಸಿಸಿಐ ಮುಂದೆ ಸಿಬ್ಬಂದಿ ವರ್ಗದವರಿಗೆ ಉತ್ತಮ ಪ್ರತಿಫಲ ಸಿಗಬೇಕೆಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ. ಅದರ ಫಲವಾಗಿ ಇದೀಗ ಪ್ರತಿಯೊಬ್ಬರಿಗೂ ಕೋಟಿ ರೂ. ಮೊತ್ತದಲ್ಲಿ ಬಹುಮಾನ ಹಣ ಲಭಿಸಿದೆ.

ಬಿಸಿಸಿಐ ಘೋಷಿಸಿದ ಬಹುಮಾನ ಮೊತ್ತದಲ್ಲಿ ಸಹಾಯಕ ಸಿಬ್ಬಂದಿಗಳಿಗೆ ಉತ್ತಮ ಪಾಲು ದೊರೆತಿದೆ. ಟೀಮ್ ಇಂಡಿಯಾದ 15 ಸದಸ್ಯರು ಮತ್ತು ರಾಹುಲ್ ದ್ರಾವಿಡ್​ಗೆ ತಲಾ 5 ಕೋಟಿ ರೂ. ನಿಗದಿ ಮಾಡಿದರೆ, ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ. ನೀಡಲಾಗಿದೆ. ಹಾಗೆಯೇ ಥ್ರೋಡೌನ್ ಸ್ಟೆಷಲಿಸ್ಟ್ ಸೇರಿದಂತೆ ಇತರೆ ಸಿಬ್ಬಂದಿಗಳು 2 ಕೋಟಿ ರೂ. ಪಡೆದಿದ್ದಾರೆ.

Leave a Reply

Your email address will not be published. Required fields are marked *