ಎರಡು ದಿನಗಳ ಹಿಂದಷ್ಟೇ ಸಂಸತ್ ಅನುಮೋದನೆ ಪಡೆದ ವಕ್ಫ್ ತಿದ್ದುಪಡಿ ವಿಧೇಯಕ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದಾರೆ. ಇದರೊಂದಿಗೆ ವಿಧೇಯಕವು ಅಧಿಕೃತವಾಗಿ ಕಾಯಿದೆಯಾಗಿ ಜಾರಿಗೆ ಬಂದಿದೆ.
ಈಗಾಗಲೇ ವಿಧೇಯಕದ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್, ಎಐಎಂಐಎಂ, ಆಪ್ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ
ಸಂಸತ್ತಿನಲ್ಲಿ ವಿಸ್ತೃತ ಚರ್ಚೆಗಳ ನಂತರ ಈ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿತ್ತು. ರಾಜ್ಯಸಭೆಯು ಶುಕ್ರವಾರ ಮುಂಜಾನೆ 128 ಮತಗಳೊಂದಿಗೆ ಮಸೂದೆಯನ್ನು ಅಂಗೀಕರಿಸಿತು. 95 ಸದಸ್ಯರು ವಿರೋಧಿಸಿದರು. ಸುಮಾರು 17 ಗಂಟೆಗಳ ಕಾಲ ಚರ್ಚೆ ನಡೆಯಿತು. ಲೋಕಸಭೆಯು 13 ಗಂಟೆಗಳ ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಿತ್ತು. ವಿರೋಧ ಪಕ್ಷದ ನಾಯಕರು ಸರ್ಕಾರವು ವಿಭಜಕ ಕಾರ್ಯಸೂಚಿಯನ್ನು ತರುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ಡಾ. ಸೈಯದ್ ನಸೀರ್ ಹುಸೇನ್ ಅವರು ಮಸೂದೆಯು ದಾರಿ ತಪ್ಪಿಸುವಂತಿದೆ ಮತ್ತು ಕೋಮು ಧ್ರುವೀಕರಣಕ್ಕಾಗಿ ಉದ್ದೇಶಿಸಲಾಗಿದೆ ಎಂದು ಹೇಳಿದರು. ಡಿಎಮ್‌ಕೆಯ ತಿರುಚಿ ಶಿವ ಅವರು ಇದನ್ನು ಜಾತ್ಯತೀತ ವಿರೋಧಿ ಮತ್ತು ಸಂವಿಧಾನ ಬಾಹಿರ ಎಂದು ಕರೆದರು. ಟಿಎಂಸಿ ಯ ಮೊಹಮ್ಮದ್ ನದಿಮುಲ್ ಹಕ್ ಅವರು ಇದು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದು, ಆಪ್ ಪಕ್ಷದ ನ ಸಂಜಯ್ ಸಿಂಗ್ ಅವರು ಮಸೂದೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

