ಸುಂಕದ ವಿಚಾರವಾಗಿ ಅಮೆರಿಕ-ಚೀನಾ ವ್ಯಾಪಾರ ಯುದ್ಧ ಹೆಚ್ಚುತ್ತಿರುವ ಮಧ್ಯೆ, ಅನೇಕ ಚೀನಾದ ಎಲೆಕ್ಟ್ರಾನಿಕ್ ಕಾಂಪೋನೆಂಟ್ ತಯಾರಕರು ಭಾರತೀಯ ಕಂಪನಿಗಳಿಗೆ 5% ವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದ್ದಾರೆ. ಇದೇ ವೇಳೆ, ಭಾರತೀಯ ಎಲೆಕ್ಟ್ರಾನಿಕ್ಸ್ ತಯಾರಕರು ಬೇಡಿಕೆಯನ್ನು ಹೆಚ್ಚಿಸಲು ಗ್ರಾಹಕರಿಗೆ ಈ ರಿಯಾಯಿತಿಯ ಕೆಲವು ಭಾಗವನ್ನು ವರ್ಗಾಯಿಸುವ ಸಾಧ್ಯತೆ ಇದೆ.ಇದರಿಂದಾಗಿ ಭಾರತದಲ್ಲಿ ಟಿವಿ, ಫ್ರಿಡ್ಜ್, ಸ್ಮಾರ್ಟ್‌ಫೋನ್‌ನಂತಹ ಅನೇಕ ಎಲೆಕ್ಟ್ರಾನಿಕ್ ವಸ್ತುಗಳು ಅಗ್ಗವಾಗುವ ಸಾಧ್ಯತೆ ಇದೆ. ಎಕನಾಮಿಕ್ ಟೈಮ್ಸ್ ಈ ಕುರಿತು ವರದಿಯನ್ನು ಪ್ರಕಟಿಸಿದೆ. ಬೇಡಿಕೆ ಕುಸಿಯುವ ಬಗ್ಗೆ ಚೀನಾದಲ್ಲಿ ಆತಂಕ: ವ್ಯಾಪಾರ ಯುದ್ಧವು ಚೀನಾದಿಂದ ಅಮೆರಿಕಕ್ಕೆ ಬರುವ ಸರಕುಗಳನ್ನು ದುಬಾರಿಯನ್ನಾಗಿ ಮಾಡುತ್ತದೆ, ಇದು ಬೇಡಿಕೆಯನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಬೇಡಿಕೆಯ ಕೊರತೆಯ ಕಳವಳವು ಚೀನಾದ ಕಾಂಪೋನೆಂಟ್ಸ್ ತಯಾರಕರ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಬೇಡಿಕೆಯನ್ನು ಹೆಚ್ಚಿಸಲು, ಈ ತಯಾರಕರು ಭಾರತೀಯ ಕಂಪನಿಗಳಿಗೆ ರಿಯಾಯಿತಿಗಳನ್ನು ನೀಡುತ್ತಿದ್ದಾರೆ.
ಸುಂಕದ ಟೈಮ್‌ಲೈನ್: ಯುಎಸ್ vs ಚೀನಾ
- ಏಪ್ರಿಲ್ 2, 2025: ಚೀನಾದ ಮೇಲೆ ಯುಎಸ್ ಒಟ್ಟು 54% (20% + 34%) ಸುಂಕಗಳನ್ನು ವಿಧಿಸಿತ್ತು. ಚೀನಾ ಯುಎಸ್ ಮೇಲೆ 67% ಸುಂಕಗಳನ್ನು ವಿಧಿಸುತ್ತಿತ್ತು.
- ಏಪ್ರಿಲ್ 4, 2025: ಯುಎಸ್ ಮೇಲೆ 34% ಹೆಚ್ಚುವರಿ ಸುಂಕವನ್ನು ವಿಧಿಸುವ ಮೂಲಕ ಚೀನಾ ಪ್ರತೀಕಾರ ತೀರಿಸಿಕೊಂಡಿತು. ಒಟ್ಟು ಸುಂಕ (67% + 34%) 101% ಆಗುತ್ತದೆ.
- ಏಪ್ರಿಲ್ 8, 2025: ಚೀನಾ 34% ಸುಂಕವನ್ನು ಹಿಂತೆಗೆದುಕೊಳ್ಳದಿದ್ದರೆ, ಹೆಚ್ಚುವರಿ 50% ಸುಂಕವನ್ನು ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.
- ಏಪ್ರಿಲ್ 9, 2025: ಚೀನಾ ಸುಂಕಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿತು ಮತ್ತು ಒಟ್ಟು ಸುಂಕವು 104% (54% + 50%) ಕ್ಕೆ ಹೆಚ್ಚಾಯಿತು.
- ಏಪ್ರಿಲ್ 9, 2025: ಯುಎಸ್ ಸುಂಕಗಳಿಗೆ ಪ್ರತಿಕ್ರಿಯೆಯಾಗಿ ಚೀನಾ 50% ಸುಂಕದೊಂದಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಒಟ್ಟು ಸುಂಕವು 151% (101% + 50%) ಆಗುತ್ತದೆ.
- ಏಪ್ರಿಲ್ 9, 2025: ಅಮೆರಿಕವು ಚೀನಾದ ಆಮದುಗಳ ಮೇಲೆ ಹೆಚ್ಚುವರಿಯಾಗಿ 21% ಸುಂಕವನ್ನು ವಿಧಿಸಿತು. ಚೀನಾದ ಮೇಲಿನ ಒಟ್ಟು ಸುಂಕವು 125% ಕ್ಕೆ ಏರಿತು.
ಸುಂಕ ಏರಿಕೆಯಿಂದಾಗಿ ಚೀನಾದ ಸರಕುಗಳು ಅಮೆರಿಕದಲ್ಲಿ ದುಬಾರಿ: ಸರಳವಾಗಿ ಹೇಳುವುದಾದರೆ, ಚೀನಾದ ಮೇಲೆ 125% ಸುಂಕ ವಿಧಿಸುವುದರಿಂದ ಚೀನಾದಲ್ಲಿ ತಯಾರಾದ $100 ಉತ್ಪನ್ನವು ಈಗ US ತಲುಪಿದಾಗ $225 ವೆಚ್ಚವಾಗುತ್ತದೆ. US ನಲ್ಲಿ ಚೀನೀ ಉತ್ಪನ್ನಗಳು ಹೆಚ್ಚು ದುಬಾರಿಯಾಗುತ್ತಿದ್ದಂತೆ, ಅವುಗಳ ಬೇಡಿಕೆ ಮತ್ತು ಮಾರಾಟ ಕಡಿಮೆಯಾಗುತ್ತದೆ.
ಅಮೆರಿಕದ ಮೇಲೆ ದಾಳಿ ಮಾಡಬೇಡಿ: ವಾಷಿಂಗ್ಟನ್‌ನಲ್ಲಿ, ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಚೀನಾದ ಮೇಲೆ ಸುಂಕಗಳನ್ನು ವಿಧಿಸಿದ ನಂತರ “ನೀವು ಅಮೆರಿಕದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ, ಅಧ್ಯಕ್ಷ ಟ್ರಂಪ್ ನಿಮಗೆ ಹೆಚ್ಚು ಘಾತಕ ದಾಳಿ ನೀಡುತ್ತಾರೆ’ ಎಂದಿದ್ದಾರೆ. ಯುಎಸ್ ಮತ್ತು ಚೀನಾ ಮಾತುಕತೆಯ ಮೇಜಿನ ಬಳಿ ಈ ವ್ಯಾಪಾರ ಯುದ್ಧವನ್ನು ಕೊನೆಗೊಳಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಲು ಬಯಸುತ್ತವೆ. ಆದರೂ, ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷ ಮತ್ತು ಮಾಜಿ ಯುಎಸ್ ವ್ಯಾಪಾರ ಅಧಿಕಾರಿ ವೆಂಡಿ ಕಟ್ಲರ್, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿನ ಬಿಕ್ಕಟ್ಟಿನಿಂದ ಇದು ಸುಲಭವಾದ ಮಾರ್ಗವಲ್ಲ ಎಂದು ಹೇಳಿದರು. ಚೀನಾ ಚೌಕಾಶಿ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.
90 ದಿನಗಳ ಕಾಲ ಪ್ರತಿತೆರಿಗೆ ಮುಂದೂಡಿಕೆ: ಏಪ್ರಿಲ್ 9 ರಂದು, ಡೊನಾಲ್ಡ್ ಟ್ರಂಪ್ ಚೀನಾವನ್ನು ಹೊರತುಪಡಿಸಿ ಎಲ್ಲಾ ದೇಶಗಳ ಮೇಲಿನ ಪ್ರತಿತೆರಿಗೆಯನ್ನು 90 ದಿನಗಳವರೆಗೆ ಮುಂದೂಡಿದ್ದಾರೆ. ಚೀನಾ ಜಾಗತಿಕ ಮಾರುಕಟ್ಟೆಗೆ ಗೌರವವನ್ನು ತೋರಿಸಿಲ್ಲ. ಅದಕ್ಕಾಗಿಯೇ ನಾನು ಆ ಸುಂಕವನ್ನು 125% ಕ್ಕೆ ಹೆಚ್ಚಿಸುತ್ತಿದ್ದೇನೆ. ಅಮೆರಿಕ ಮತ್ತು ಇತರ ದೇಶಗಳನ್ನು ಲೂಟಿ ಮಾಡುವ ದಿನಗಳು ಮುಗಿದಿವೆ ಎಂದು ಚೀನಾ ಶೀಘ್ರದಲ್ಲೇ ಅರ್ಥಮಾಡಿಕೊಳ್ಳುತ್ತದೆ ಎಂದು ಆಶಿಸುತ್ತೇವೆ ಎಂದಿದ್ದಾರೆ.