ಮಹಿಳಾ ಶವದೊಂದಿಗೆ ವಾರ್ಡ್ ಬಾಯ್ ನಡೆದುಕೊಂಡ ರೀತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮೃತಮಹಿಳೆಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಉತ್ತರ ಪ್ರದೇಶದ ಶಾಮಲಿ ಜಿಲ್ಲೆಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ, ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮರಣೋತ್ತರ ಶವ ಪರೀಕ್ಷೆಗಾಗಿ ಮೃತದೇಹವನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಶವವನ್ನು ಆಸ್ಪತ್ರೆಯಲ್ಲಿರಿಸಿದ್ದ ವೇಳೆ ವಾರ್ಡ್ ಬಾಯ್ ತನ್ನ ಕೈಚಳಕ ತೋರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬಾಬ್ರಿ ಕ್ಷೇತ್ರದ ಹಿರ್ನಾವಾಡ ಗ್ರಾಮದ ನಿವಾಸಿಯಾಗಿರುವ ಸಚಿನ್ ಕುಮಾರ್ ಎಂಬವರ ಪತ್ನಿ 26 ವರ್ಷದ ಶ್ವೇತಾ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಅಪಘಾತದ ತೀವ್ರತೆಗೆ ರಸ್ತೆಯಲ್ಲಿ ಶ್ವೇತಾ ಪ್ರಾಣಪಕ್ಷಿ ಹಾರಿಹೋಗಿತ್ತು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹದ ಮೇಲಿನ ಚಿನ್ನದೊಲೆ ನಾಪತ್ತೆಯಾಗಿತ್ತು. ಕುಟುಂಬಸ್ಥರು ಪೊಲೀಸರ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡಿದ್ದರು. ಪೊಲೀಸರೇ ಶ್ವೇತಾ ಧರಿಸಿದ್ದ ಚಿನ್ನಾಭರಣವನ್ನು ತೆಗೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಈ ಸಂಬಂಧ ತನಿಖೆ ಆರಂಭಿಸಿದಾಗ ಪೊಲೀಸರ ಮುಂದೆ ವಾರ್ಡ್‌ ಬಾಯ್ ವಿಜಯ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತನಗೆ ನೆಲದ ಮೇಲೆ ಕಿವಿಯೊಲೆ ಸಿಕ್ಕಿತ್ತು ಮತ್ತು ಅದನ್ನು ಪೊಲೀಸರ ವಶಕ್ಕೆ ನೀಡಿದ್ದೇನೆ ಎಂದು ಹೇಳಿದ್ದನು. ವಿಜಯ್ ಮಾತಿನ ಮೇಲೆ ಅನುಮಾನ ಬಂದು ಪೊಲೀಸರು ಆಸ್ಪತ್ರೆಯಲ್ಲಿನ ಸಿಸಿಟಿವಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ಶವದ ಮೇಲೆ ಬಟ್ಟೆ ಹಾಕುವ ಸಂದರ್ಭದಲ್ಲಿ ಕಿವಿಯೊಲೆ ಬಿಚ್ಚಿಕೊಂಡಿದ್ದಾನೆ. ನಂತರ ನಿಧಾನವಾಗಿ ಚಿನ್ನದ ಕಿವಿಯೊಲೆಯನ್ನು ಜೇಬಿಗೆ ಇಳಿಸಿಕೊಂಡಿದ್ದಾನೆ. ತನ್ನ ಸುತ್ತಲೂ ಜನರಿದ್ರೂ ಯಾರಿಗೂ ತಿಳಿಯುತ್ತಿದ್ದಂತೆ ಮೃತದೇಹದ ಮೇಲಿನ ಚಿನ್ನದ ಕಿವಿಯೊಲೆ ಕಳ್ಳತನ ಮಾಡಿದ್ದಾನೆ. ಪೊಲೀಸರು ವಿಡಿಯೋ ಪರಿಶೀಲಿಸುವಷ್ಟರಲ್ಲಿ ವಾರ್ಡ್ ಬಾಯ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ.

ಶ್ವೇತಾ ಪತಿ ಸಚಿನ್ ಕುಮಾರ್ ನೀಡಿದ ದೂರಿನನ್ವಯ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಆರೋಪಿ ವಾರ್ಡ್ ಬಾಯ್ ವಿಜಯ್ ವಿರುದ್ಧ ಆದರ್ಶಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *