ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಭಾರತಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವರ್ಷದ ಐಪಿಎಲ್‌ನಲ್ಲಿ ಇನ್ನು 16 ಪಂದ್ಯಗಳು ಬಾಕಿ ಇರುವಂತೆಯೇ ಇಡೀ ಟೂರ್ನಿಯನ್ನು ರದ್ದು ಮಾಡಿದೆ. ಪಾಕಿಸ್ತಾನ ವಿರುದ್ಧ ಯುದ್ದ ಭೀತಿ ಹೆಚ್ಚಾಗಿರುವ ನಡುವೆ, ಸಂಘರ್ಷ ಕಡಿಮೆಯಾಗಿರುವ ಲಕ್ಷಣಗಳು ಕಾಣದೇ ಇರುವ ಕಾರಣಕ್ಕೆ ಸರ್ಕಾರವನ್ನು ಸಂಪರ್ಕಿಸಿದ ಬಳಿಕ ಬಿಸಿಸಿಐ ಈ ನಿರ್ಧಾರ ಮಾಡಿದೆ.
ಗೃಹ ಇಲಾಖೆಯ ಸೂಚನೆಯ ಮೇರೆಗೆ ಈ ನಿರ್ಧಾರ ಮಾಡಲಾಗಿದೆ. ಇಂದು ನಡೆದ ಸಭೆಯಲ್ಲಿ ಈ ವಿಚಾರ ತಿಳಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲಿ ಕ್ರಿಕೆಟ್ ನಡೆಸುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕೊರೋನಾ ಸಂಕಷ್ಟದಲ್ಲಿಯೂ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಿದ ಬಿಸಿಸಿಐ, ಇದೀಗ ಗೃಹ ಇಲಾಖೆ ಸೂಚನೆ ಮೇರೆಗೆ ಉಳಿದ 16 ಪಂದ್ಯಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. ಯುದ್ಧ ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಉಳಿದ ಪಂದ್ಯಗಳು ಮುಂದುವರಿಯುವ ಸಾಧ್ಯತೆ ಇದೆ. ಪಂದ್ಯ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಜಮಾಯಿಸುವ ಸಾಧ್ಯತೆ ಇದ್ದು, ವೈರಿ ರಾಷ್ಟ್ರ ಪಾಕಿಸ್ತಾನ ಇದನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣದ ಮೇಲೆಯೇ ಗುಂಡಿನ ದಾಳಿ ಮಾಡುವ ಸಾಧ್ಯತೆ ಇರುವುದರಿಂದ, ಗೃಹ ಇಲಾಖೆ ಸೂಚನೆ ಮೇರೆಗೆ ಬಿಸಿಸಿಐ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.