ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಹೊರವಲಯದ ಮುರ ಜಂಕ್ಷನ್ ಸಮೀಪ ಮಂಗಳವಾರ ನಡೆದಿದೆ.
ಈಶ್ವರ್ ಭಟ್ ಅಂಡೆಪುನಿ ಅವರ ಮನೆಯಲ್ಲಿ ಇಂದು ಶ್ರಾದ್ಧ ಕಾರ್ಯಕ್ರಮವಿತ್ತು. ಇದರಲ್ಲಿ ಭಾಗವಹಿಸಲು ಅವರ ಮಗಳು ಅಪೂರ್ವ ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಬಂದಿದ್ದರು. ಈಶ್ವರ್ ಭಟ್ ಅವರು ಪುತ್ತೂರು ಪೇಟೆಯಿಂದ ಇವರನ್ನು ತಮ್ಮ ವ್ಯಾಗನರ್ ಕಾರಿನಲ್ಲಿ ಮನೆಗೆ ಕರೆದುಕೊಮಡು ಹೋಗುತಿದ್ದರು. ಈ ವೇಳೆ ಮುರ ಜಂಕ್ಷನ್ ಬಳಿ ಕಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ, ನಜ್ಜುಗುಜ್ಜಾಗಿದ್ದ ಕಾರಿನಿಂದ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.