ಗುಜರಾತ್ ನ ಅಹಮದಾಬಾದ್ ನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಏರ್ ಇಂಡಿಯಾ ದುರಂತದಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದರು. ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ರಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು.

ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು. ವಿಮಾನವು ಹಾಸ್ಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತು. ಪರಿಣಾಮವಾಗಿ ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟಿದ್ದರು.

ಇನ್ನೂ ವಿಮಾನ ಪತನಗೊಂಡ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೈರಲ್ ದೃಶ್ಯವನ್ನು ಸೆರೆಹಿಡಿದಿದ್ದು 17 ವರ್ಷದ ಹುಡುಗ. ಹೌದು, ಆರ್ಯನ್ ಅಸಾರಿ ಎಂಬ ಬಾಲಕ ವಿಮಾನ ಪತನದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ವಿಮಾನ ಹತ್ತಿರದಿಂದ ಹೋಗುತ್ತಿರುವುದನ್ನು ಸ್ನೇಹಿತರಿಗೆ ತೋರಿಸುವ ಸಲುವಾಗಿ ಈ ವೀಡಿಯೋ ಮಾಡಿದ್ದೆ, ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು ಎಂದು ಬಾಲಕ ಹೇಳಿದ್ದಾನೆ.

ಈ ಕುರಿತು ಮಾಧ್ಯಮವೊಂದರೊಂದಿಗೆ ಮಾತನಾಡಿದ ಆರ್ಯನ್, ನಾನು ಜೂನ್ 12ರಂದು ಅಹಮದಾಬಾದ್‌ಗೆ ಬಂದೆ. ವಿಮಾನ ತುಂಬಾ ಹತ್ತಿರದಿಂದ ಹಾದು ಹೋಗುತ್ತಿತ್ತು. ಆದ್ದರಿಂದ ನನ್ನ ಸ್ನೇಹಿತರಿಗೆ ಅದನ್ನು ತೋರಿಸಲು ನಾನು ವೀಡಿಯೋ ಮಾಡಲು ಯೋಚಿಸಿದೆ. ನೋಡುತ್ತಿದ್ದಂತೆಯೇ ವಿಮಾನ ಕೆಳಗೆ ಹೋಯಿತು. ವಿಮಾನ ನಿಲ್ದಾಣ ಹತ್ತಿರದಲ್ಲಿರುವುದರಿಂದ ಲ್ಯಾಂಡ್ ಆಗಬಹುದು ಎಂದು ನಾನು ಭಾವಿಸಿದೆ. ಆದರೆ ಅದು ಕೆಳಗೆ ಹೋದಂತೆ ಬೆಂಕಿಯ ಜ್ವಾಲೆಗಳು ಮೇಲಕ್ಕೆ ಬರಲು ಪ್ರಾರಂಭಿಸಿದವು. ಬಳಿಕ ಅದು ಸ್ಫೋಟಗೊಂಡಿದ್ದನ್ನು ನಾವು ನೋಡಿದ್ದೇವೆ. ಈ ವೇಳೆ ನನಗೆ ಭಯವಾಯಿತು. ನಾನು ವೀಡಿಯೋವನ್ನು ನನ್ನ ಸಹೋದರಿಗೆ ತೋರಿಸಿದೆ. ಅಲ್ಲದೇ ಅದರ ಬಗ್ಗೆ ನನ್ನ ತಂದೆಗೂ ಹೇಳಿದೆ ಎಂದು ತಿಳಿಸಿದ್ದಾನೆ.

Leave a Reply

Your email address will not be published. Required fields are marked *