ಸುಳ್ಯದಲ್ಲಿ ಇಂದು ಭಾರತೀಯ ಮಜ್ದೂರ್ ಸಂಘ ಮತ್ತು ಸುಳ್ಯ ಮಂಡಲ ಬಿಜೆಪಿಯವರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈಯವರ ವಿರುದ್ಧ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಹಾಗೂ ಇನ್ನಿತರ ಬಿಜೆಪಿ ನಾಯಕರು ಏಕವಚನದಲ್ಲಿ ನಿಂದಿಸಿ, ಸುಳ್ಯಕ್ಕೆ ಬಂದರೆ ದಿಗ್ಬಂಧನ ಹಾಕುತ್ತೇವೆ ಎಂಬುದಾಗಿ ಪ್ರಚೋದನಕಾರಿಯಾಗಿ ಬಹಿರಂಗ ಭಾಷಣ ಮಾಡಿರುವುದು ಖಂಡನೀಯ. ಅಲ್ಲದೇ ಮುಂದಿನ ದಿನಗಳಲ್ಲಿ ಹಾರೆ ಪಿಕ್ಕಾಸು ಸಬ್ಬಲು ಹಿಡಿದು ಕಾಂಗ್ರೆಸ್ ನವರಿಗೆ ಬೀದಿ ನಾಯಿಗಳಿಗೆ ಹೊಡೆದ ಹಾಗೆ ಬೀದಿ ಬೀದಿಗಳಲ್ಲಿ ಹೊಡೆಯಲಿದ್ದಾರೆ ಎಂದು ಸಾಮಾಜಿಕ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡಿರುವುದನ್ನು ಸುಳ್ಯ ಯುವ ಕಾಂಗ್ರೆಸ್ ಖಂಡಿಸುತ್ತದೆ.
ಸುಳ್ಯ ಕಾಂಗ್ರೆಸ್ ನಲ್ಲಿ ಪುಂಡ ಪೋಕರಿಗಳಿದ್ದಾರೆ, ಕಾಂಗ್ರೆಸ್ ನ ಕೈ ಮೊದಲೇ ತುಂಡಾಗಿದೆ ಎಂದು ಟೀಕೆ ಮಾಡಿರುವ ಬಿಜೆಪಿ ಮಂಡಲಾಧ್ಯಕ್ಷರು ಸುಳ್ಯದ ಬಿಜೆಪಿ ಹತ್ತು ಹಲವು ಚೂರಾಗಿ ಹಲವು ಬಣಗಳಾಗಿ ಹರಿದು ಚೂರಾಗಿರುವುದನ್ನು ಮುಟ್ಟಿ ನೋಡಿಕೊಳ್ಳಲಿ. ತನ್ನದೇ ಪಕ್ಷದಲ್ಲಿ ಹಲವಾರು ಪುಂಡ ಪೋಕರಿಗಳನ್ನು ಸಲಹುತ್ತಿರುವುದು ಮತ್ತು ಈಗಾಗಲೇ ಗಡೀಪಾರು ಆದೇಶ ಪಡೆದಿರುವವರು ಅವರದೇ ಮಂಡಲದ ಬಿಜೆಪಿ ಪಕ್ಷದಲ್ಲಿ ಇರುವುದನ್ನು ಮರೆತು ಇತರರ ಕುರಿತು ಮಾತನಾಡುವುದು ಹಾಸ್ಯಾಸ್ಪದ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಗ್ಯಾರಂಟಿ ಯೋಜನೆಗಳಯಶಸ್ಸನ್ನು ಸಹಿಸಲಾಗದ ಬಿಜೆಪಿಗರು ಕೆಂಪು ಕಲ್ಲು ಸಮಸ್ಯೆ, ಮರಳಿನ ಸಮಸ್ಯೆಗಳ ಕುರಿತು ಈಗ ರಾಜಕೀಯ ನಾಟಕದ ಮಾತುಗಳನ್ನು ಆಡುತ್ತಿದ್ದಾರೆ. ಈಗಾಗಲೇ ಈ ಸಮಸ್ಯೆಗಳ ನಿವಾರಣೆ ಮತ್ತು ಕೆಂಪು ಕಲ್ಲು, ಮರಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡು ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮರಳು, ಕೆಂಪು ಕಲ್ಲಿನ ಅಕ್ರಮ ತಡೆಗಟ್ಟಲು ಹೊಸ ಕಾನೂನು ರೂಪಿಸಿ ಸಮಸ್ಯೆಗಳ ಪರಿಹರಿಸಿ, ಕಾನೂನಾತ್ಮಕವಾಗಿಯೇ ಸುಲಭವಾಗಿ ಕೆಂಪು ಕಲ್ಲು ಮತ್ತು ಮರಳು ಲಭ್ಯವಾಗುವಂತೆ ನಿಯಮ ರೂಪಿಸುತ್ತಿದ್ದಾರೆ. ಇದನ್ನು ಅರಿತುಕೊಂಡಿರುವ ಬಿಜೆಪಿಗರು ಮಜ್ದೂರ್ ಸಂಘದ ಮುಖಾಂತರ ಮುಗ್ಧ ಕಾರ್ಮಿಕರು ಮತ್ತು ಸಾರ್ವಜನಿಕರನ್ನು ಹಾದಿ ತಪ್ಪಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


