ಮುಂಬೈ : ಯುವಜನತೆಯ ದಾರಿ ತಪ್ಪಿಸುವ ಜೂಜು ಆ್ಯಪ್ ಗಳಾಗ ಜಂಗ್ಲೀ ರಮ್ಮಿ ಮತ್ತು ರಮ್ಮಿ ಸರ್ಕಲ್ ನಿಷೇಧ ಕೋರಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಅರ್ಜಿ ಸಲ್ಲಿಸಲಾಗಿದೆ. ಸೊಲಾಪೂರ್ ಮೂಲದ ಸಮಾಜ ಸೇವಕ ಗಣೇಶ್ ರಾಣು ನಾನಾವರೆ ಎಂಬುವರು ಈ PIL ಅರ್ಜಿ ಸಲ್ಲಿಸಿದ್ದಾರೆ. ಈ ಆ್ಯಪ್‌ಗಳು ವಿಶೇಷವಾಗಿ ಯುವಜನರಲ್ಲಿ ತೀವ್ರ ಸಾಮಾಜಿಕ ಹಾನಿಯನ್ನುಂಟು ಮಾಡುತ್ತಿರುವುದರಿಂದ ಇವುಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ತಾವು ಈ ಎರಡು ಆ್ಯಪ್‌ಗಳನ್ನು ನಿಷೇಧಿಸುವಂತೆ ಕೋರಿ ಈ ಹಿಂದೆ ರಾಷ್ಟ್ರಪತಿ ಪ್ರಧಾನ ಮಂತ್ರಿ ಕಚೇರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಮಟ್ಟದ ಕಚೇರಿಗಳಿಗೆ ಪತ್ರ ಬರೆದಿದ್ದರೂ ಯಾರೂ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೊರೆ ಹೋಗಿರುವುದಾಗಿ ನಾನಾವರೆ ತಿಳಿಸಿದ್ದಾರೆ.
ಬಾಂಬೆ ಹೈಕೋರ್ಟಿಗೆ ಸಲ್ಲಿಕೆಯಾದ ಅರ್ಜಿಯ ಪ್ರಮುಖಾಂಶಗಳು
- ಈ ಆ್ಯಪ್‌ಗಳು ವ್ಯಸನಕಾರಿಯಾಗಿದ್ದು ಬಳಕೆದಾರರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದು ಕೆಲವರನ್ನು ಆತ್ಮಹತ್ಯೆಯ ಸ್ಥಿತಿಗೆ ಕೊಂಡೊಯ್ದಿದೆ
- ಈ ಅಪ್ಲಿಕೇಶನ್‌ಗಳು 1867ರ ಸಾರ್ವಜನಿಕ ಜೂಜು ಕಾಯಿದೆ, 1887ರ ಬಾಂಬೆ ಜೂಜು ತಡೆ ಕಾಯಿದೆ ಮತ್ತು 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾಯಿದೆ ಸೇರಿದಂತೆ ವಿವಿಧ ಕಾನೂನುಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತವೆ
- ಅವಕಾಶದ ಆಟವೆಂದು ಪರಿಗಣಿಸಲಾದ ಮತ್ತು ಭಾರತದ ಹಲವು ಭಾಗಗಳಲ್ಲಿ ಕಾನೂನುಬಾಹಿರ ಎನಿಸಿಕೊಂಡ ಜೂಜಿಗೆ ಉತ್ತೇಜನ ನೀಡುವ ಮೂಲಕ ಭಾರತೀಯ ದಂಡ ಸಂಹಿತೆಯನ್ನು ಈ ಆ್ಯಪ್‌ಗಳು ಉಲ್ಲಂಘಿಸುತ್ತವೆ.
- ಅಂತಹ ಆನ್‌ಲೈನ್ ಜೂಜಿಗೆ ತಾನು ಅವಕಾಶ ನೀಡಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಮಾಹಿತಿ ಹಕ್ಕು ಕಾಯಿದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ.
- ಖ್ಯಾತನಾಮರು ಕೂಡ ಈ ಆ್ಯಪ್‌ಗಳನ್ನು ಪ್ರಚುರಪಡಿಸಿ ಅವುಗಳ ಜನಪ್ರಿಯತೆಗೆ ಕೊಡುಗೆ ನೀಡಿದ್ದು ಆ ಮೂಲಕ ಸಾಮಾಜಿಕ ಹಾನಿ ಉಂಟುಮಾಡಿದ್ದಾರೆ.
ಆ್ಯಪ್‌ಗಳನ್ನು ತಡೆಹಿಡಿಯುವಂತೆ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಈಗಾಗಲೇ ಲೀಗಲ್ ನೋಟಿಸ್ ಕಳಿಸಲಾಗಿದೆ. ಆದರೂ ಈವರೆಗೆ ಅಲ್ಲಿಂದ ಉತ್ತರ ದೊರೆತಿಲ್ಲ. ಬದಲಿಗೆ ಸರ್ವರ್‌ಗಳು ಜಂಗ್ಲೀ ರಮ್ಮಿ ಮತ್ತು ರಮ್ಮಿ ಸರ್ಕಲ್‌ನ ಕಾರ್ಯಾಚರಣೆಗೆ ಅನುವು ಮಾಡಿವೆ. - ಆ್ಯಪ್‌ಗಳನ್ನು ನಿಷೇಧಿಸಬೇಕು ಮತ್ತು ಗೂಗಲ್ ಇಂಡಿಯಾ ಈ ಆ್ಯಪ್‌ಗಳಿಗೆ ಸರ್ವರ್ ಸೌಲಭ್ಯ ನೀಡುವುದನ್ನು ತಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವ ರಿಟ್ ಆದೇಶ ಹೊರಡಿಸಬೇಕು.
ಈ ಆ್ಯಪ್‌ಗಳು ವ್ಯಸನಕಾರಿಯಾಗಿದ್ದು ಬಳಕೆದಾರರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದು ಕೆಲವರನ್ನು ಆತ್ಮಹತ್ಯೆಯ ಸ್ಥಿತಿಗೆ ಕೊಂಡೊಯ್ದಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.