ಮಂಗಳೂರು: ಪ್ರಸಕ್ತ ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಹಿಂಸೆ, ಹೆಣ್ಣಿನ ಬಗ್ಗೆ ಕೀಳರಿಮೆ ಕುರಿತು ಜಾಗೃತಿ ಮೂಡಿಸಲು ಸೆ.1ರಿಂದ 30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ದೇಶಾದ್ಯಂತ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
“ಕೊಲ್ಕೊತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಹತ್ಯೆ ಘಟನೆಯಿಂದ ಹಿಡಿದು ಕಾರ್ಕಳದಲ್ಲಿ ನಡೆದಿರುವ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದವರೆಗೆ ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎನ್ನುವುದೇ ಇಲ್ಲವಾಗಿದೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡಲಾಗುತ್ತದೆ. ಇದೆಲ್ಲದಕ್ಕೂ ಕಾರಣ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ಮಾರಾಟವೇ ಆಗಿದೆ. ಇಷ್ಟೇ ಅಲ್ಲದೆ ಅಶ್ಲೀಲ ವೆಬ್ ಸೈಟ್, ಗಳ ವೀಕ್ಷಣೆ ಹಾಗೂ ಸಾಮಾಜಿಕ ಜಾಲತಾಣಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ.
ಇಂತಹ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶಾದ್ಯಂತ ಒಂದು ತಿಂಗಳ ಕಾಲ ಅಭಿಯಾನವನ್ನು ಆಯೋಜಿಸಲಾಗುವುದು. ಸೆ.1ರಿಂದ 30ರವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಅಭಿಯಾನ ನಡೆಸಲಾಗುವುದು“ ಎಂದು ಅಭಿಯಾನದ ರಾಜ್ಯ ಸಮಿತಿ ಸದಸ್ಯೆ ಸಬೀಹಾ ಫಾತಿಮಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಸಂಘಟನೆಯ ಸಲಹಾ ಸಮಿತಿ ಸದಸ್ಯೆ ಶಮಿರಾ ಜಹಾನ್ ಮಾತನಾಡಿ, ”ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿ ಕುರ್ ಆನ್ ಮತ್ತು ಸುನ್ನತ್ ಬೆಳಕಿನಲ್ಲಿ ಇಸ್ಲಾಮಿನ ಸರಿಯಾದ ಅರಿವನ್ನು ಉಂಟು ಮಾಡುವುದು ಹಾಗೂ ತಮ್ಮ ಜೀವನವನ್ನು ಅದರ ಮಾನದಂಡದಲ್ಲಿ ಎರಕಹೊಯ್ಯುವಂತೆ ಪ್ರೇರೇಪಿಸುವುದರ ಕಡೆಗೆ ಗಮನವೀಯಲಾಗುವುದು. ಅಭಿಯಾನದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದಾಹರಣೆಗೆ, ‘ಧರ್ಮದಲ್ಲಿ ನೈತಿಕತೆಯ ಕಲ್ಪನೆ’ ಶೀರ್ಷಿಕೆಯಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಶಾಲಾ-ಕಾಲೇಜುಗಳಲ್ಲೂ ಉಪನ್ಯಾಸ, ವೈಯಕ್ತಿಕ ಭೇಟಿ, ಸಮಾಜದ ಪ್ರಸಿದ್ಧ ವ್ಯಕ್ತಿಗಳ ಸಂದರ್ಶನ ನಡೆಸುವುದು ಅದರ ಪ್ರಮುಖ ಅಂಶಗಳನ್ನು ಆಯ್ದು ಸೋಶಿಯಲ್ ಮೀಡಿಯಾದ ಮೂಲಕ ಪ್ರಚಾರ ಮಾಡುವುದು. ಲೇಖನ, ಭಾಷಣ ಸ್ಪರ್ಧೆ, ಪೋಸ್ಟರ್ ಡಿಸೈನಿಂಗ್, ಕಥೆ ಮುಂತಾದವುಗಳ ಸ್ಪರ್ಧೆಗಳನ್ನು ನಡೆಸಲಾಗುವುದು. ಕರ್ನಾಟಕದಲ್ಲಿ ಈ ಅಭಿಯಾನದ ಉದ್ಘಾಟನೆಯು ಸೆಪ್ಟೆಂಬರ್ 1ರಂದು ನೆರವೇರಲಿರುವುದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಮುಹಮ್ಮದ್ ಸಅದ್ ಬೆಳಗಾವಿಯವರುಇದರ ಅಧ್ಯಕ್ಷತೆ ವಹಿಸಲಿದ್ದಾರೆ“ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ನಗರ ಸಂಚಾಲಕಿ ಸುಮಯ್ಯ ಹಮೀದುಲ್ಲ, ಶಹಿದಾ ಉಮರ್ ಉಪಸ್ಥಿತರಿದ್ದರು.