ಕೆವಿಎನ್ ಪ್ರೊಡಕ್ಷನ್ ಇದೀಗ ದಳಪತಿ ವಿಜಯ್ ನಟನೆಯ ತಮಿಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ವಿಜಯ್ ಅವರ 69ನೇ ಸಿನಿಮಾ ಮತ್ತು ವೃತ್ತಿ ಬದುಕಿನ ಕೊನೆಯ ಚಿತ್ರ ಇದಾಗಿದ್ದು 500 ಕೋಟಿ ರು.ಗೂ ಅಧಿಕ ಬಂಡವಾಳದಲ್ಲಿ ನಿರ್ಮಾಣಗೊಳ್ಳಲಿದೆ.
ತಮಿಳಿನ ಖ್ಯಾತ ನಿರ್ದೇಶಕ ಹೆಚ್ ವಿನೋದ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಇದು ಕೆವಿಎನ್ ಸಂಸ್ಥೆಯ 5ನೇ ಸಿನಿಮಾವಾಗಿದೆ. ವಿಜಯ್ ನಟನೆಯ ಕೊನೆಯ ಸಿನಿಮಾ ಎಂಬಂತೆ ಬಿಂಬಿಸುವ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆ ದಾಖಲಿಸಿದೆ. ಆದರೆ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಘೋಷಣೆಯಾಗಿದ್ದಕ್ಕೆ ಸಂಭ್ರಮಿಸುವ ಬದಲು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ಸಿನಿಮಾ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಅವರ ಬೇಸರಕ್ಕೆ ಕಾರಣ. ಹೌದು, ದಳಪತಿ ವಿಜಯ್ ತಮ್ಮ ಮುಂದಿನ ಚಿತ್ರ ದಳಪತಿ 69ನೇ ಸಿನಿಮಾಗೆ ಬರೋಬ್ಬರಿ 275 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ನಟನಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು 250 ಕೋಟಿ ರೂ. ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿದ್ದರು. ಇದೀಗ ಶಾರುಖ್ ಖಾನ್ ಅವರನ್ನ ಹಿಂದಿಕ್ಕಿ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ.