ಬೆಂಗಳೂರು : ಖಾಸಗಿ ಕಾಲೇಜಿನ ಮಹಿಳಾ ಶೌಚಾಲಯ ಕೊಠಡಿಯಲ್ಲಿ ಮೊಬೈಲ್ ಇಟ್ಟು ರಹಸ್ಯವಾಗಿ ವಿಡಿಯೋ (hidden camera) ಚಿತ್ರೀಕರಣ ಮಾಡುತ್ತಿದ್ದ ಹೇಯ ಕೃತ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ವಿದ್ಯಾರ್ಥಿ ಬೆಂಗಳೂರಿನನ ಕುಂಬಳಗೂಡು ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ಮೈಸೂರು ರಸ್ತೆಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಅದೇ ಕಾಲೇಜಿನ ಕುಶಾಲ್ ಎಂಬ ವಿದ್ಯಾರ್ಥಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ವಿದ್ಯಾರ್ಥಿನಿಯೊಬ್ಬರು ಗಮನಿಸಿ ಗಾಬರಿಯಿಂದ ಹೊರಗೆ ಓಡಿ ಬಂದು ಇತರರಿಗೆ ವಿಷಯ ತಿಳಿಸಿದ್ದಾಳೆ. ಈ ವೇಳೆ ಕ್ಯಾಮೆರಾ ಇಟ್ಟ ಕುಶಾಲ್‍ನನ್ನು ಇತರ ವಿದ್ಯಾರ್ಥಿಗಳು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಘಟನೆಯನ್ನು ಖಂಡಿಸಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಪರಿಣಾಮ ತೀವ್ರವಾಗುತ್ತಿದ್ದಂತೆ ಕುಂಬಳಗೂಡು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಕುಶಾಲ್‍ನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆರೋಪಿ ಕುಶಾಲ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದ್ದು, ಈತನ ಬಳಿ ಒಟ್ಟು ಸುಮಾರು 8ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಕ್ಲಿಪ್‍ಗಳಿವೆ ಎಂದು ಹೇಳಲಾಗುತ್ತಿದೆ.


ಆರೋಪಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ಬೆಳಿಗ್ಗೆ 10.30ರಿಂದ 10.45ರ ಅವಧಿಯಲ್ಲಿ ಎರಡು ವಿಡಿಯೊಗಳು ಪತ್ತೆಯಾಗಿವೆ. ಒಂದು 14ನಿಮಿಷವಿದ್ದು, ಮತ್ತೊಂದು 59 ಸೆಕೆಂಡ್ ಇದೆ.
ಆರೋಪಿ ಹಿಂದೆಯೂ ಇದೇ ರೀತಿ ವಿಡಿಯೊಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆಯೇ ? ಬೇರೆಯವರ ಬಳಿ ಹಂಚಿಕೊಂಡಿದ್ದಾನೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಮೊಬೈಲ್‌ನಲ್ಲಿರುವ ಸಂಪೂರ್ಣ ದತ್ತಾಂಶ ರಿಕವರಿ ಮಾಡಲು ಸೈಬರ್ ವಿಭಾಗಕ್ಕೆ ಮೊಬೈಲ್ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.