ಹೆಬ್ರಿ ಅಕ್ಟೋಬರ್ 1: ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಕೆಎಸ್ ಆರ್ ಟಿಸಿ ಬಸ್ ಸಿಬ್ಬಂದಿ ಬಸ್ಸನ್ನು ನೇರವಾಗಿ ಹೆಬ್ರಿಯ ಸರಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ಕೊಂಡೊಯ್ದು ಆಕೆಯ ಚಿಕಿತ್ಸೆ ಕೊಡಿಸಿದ ಘಟನೆ ಸೋಮವಾರ ಸಂಜೆ ಹೆಬ್ರಿಯಲ್ಲಿ ನಡೆದಿದೆ. ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಮೇಗರವಳ್ಳಿಯಲ್ಲಿ ಸುರಕ್ಷಾ ಎಂಬವರು ಏರಿದ್ದರು. ಆಗುಂಬೆ ಘಾಟಿ ತಲುಪುವಷ್ಟರಲ್ಲಿ ಸುರಕ್ಷಾ ತೀವ್ರ ಅಸ್ವಸ್ಥಗೊಂಡರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕ ವಾಸಿಮ್ ದೇಸಾಯಿ ಸಹಾಯಕ್ಕೆ ಧಾವಿಸಿದ್ದು, ಚಾಲಕ ತಾರೇಶ್ ಬಸ್ಸನ್ನು ನೇರವಾಗಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಸುರಕ್ಷಾರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲಿ. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಸ್ ಸಿಬ್ಬಂದಿ ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಗೆ ಕರೆತಂದಿದ್ದಾರೆ.ಈ ವೇಳೆ ಹೆಬ್ರಿ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಪೊಲೀಸರು ಸೋಮೇಶ್ವರ ದಿಂದ ಹೆಬ್ರಿಯ ಆಸ್ಪತ್ರೆಯ ತನಕ ಟ್ರಾಫಿಕ್ ಸಮಸ್ಯೆ ಆಗದಂತೆ ಸಹಕರಿಸಿದ್ದಾರೆ. ಸುರಕ್ಷಾರನ್ನು ಹೆಬ್ರಿ ಸರಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.