ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರಪಿತ ಗಾಂಧೀಜಿಯವರ 155ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆರಂಭದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ಪುಷ್ಪ ನಮನ ಸಲ್ಲಿಸಿ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಗಾಂಧಿ ಜಯಂತಿ ಆಚರಣೆಯ ಮಹತ್ವವನ್ನು ತಿಳಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕೆ ಗಾಂಧೀಜಿಯವರ ಜೀವನ ಸಾಧನೆ ಕುರಿತು ಮಾತನಾಡಿದರು.
ಬಳಿಕ ಸ್ವಚ್ಛತಾ ಆಂದೋಲನಾ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಕಾಲೇಜಿನ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ಗಾಂಧಿ ಹಾಗೂ ಇತರೆ ಮಹಾನ್ ನಾಯಕರ ಜೀವನ ಸಾಧನೆ ಹಾಗೂ ಅವಿಸ್ಮರಣೀಯ ಕೊಡುಗೆಗಳ ಕುರಿತು ಸ್ಮರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ದೇಶಪ್ರೇಮ, ಸ್ವಾತಂತ್ರ್ಯ, ಸಮಾನತೆ ಶಾಂತಿ, ಅಹಿಂಸೆ, ಸತ್ಯ ನಿಧಿ, ಪ್ರಾಮಾಣಿಕತೆ, ಜಾತ್ಯತೀತತೆ, ಜೀವನ ಮೌಲ್ಯಗಳು, ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶ್ರೀಮತಿ ರತ್ನಾವತಿ ಡಿ, ಐಕ್ಯೂಎಸಿ ಸಂಚಾಲಕಿ ಡಾ. ಮಮತಾ ಕೆ., ಕಛೇರಿ ಅಧೀಕ್ಷಕಿ ನಿವೇದಿತಾ ಎಂ, ಎನ್ ಸಿ ಸಿ, ಎನ್ ಎಸ್ ಎಸ್ , ಯುವ ರೆಡ್ ಕ್ರಾಸ್ , ರೇಂಜರ್- ರೋವರ್ ಕಾರ್ಯಕ್ರಮಾಧಿಕಾರಿಗಳು ಹಾಗೂ ಸ್ವಯಂ ಸೇವಕರು, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಬೋಧಕ- ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.