ಕೊಲ್ಲಂ: ಮಲಯಾಳಂ ಚಿತ್ರರಂಗದ (Mollywood) ಹಿರಿಯ ನಟ ಟಿ.ಪಿ. ಮಾಧವನ್ (TP Madhavan) ಬುಧವಾರ (ಅ.09) ಕೊಲ್ಲಂನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ವೆಂಟಿಲೇಟರ್ ಸಹಾಯದಿಂದ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಗೌರವಾನ್ವಿತ ಪ್ರಾಧ್ಯಾಪಕರಾದ ಎನ್.ಪಿ. ಪಿಳ್ಳೆ ಅವರ ಪುತ್ರರಾದ ಮಾಧವನ್, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ನಟನಾ ವೃತ್ತಿಗೆ ಕಾಲಿಡುವ ಮೊದಲು ಅವರು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಜಾಹೀರಾತು ಏಜೆನ್ಸಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಮೊದಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಯ ನಟ ಮಾಧವನ್, ಇತ್ತೀಚೆಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದ ತೀವ್ರ ಬಳಲುತ್ತಿದ್ದರು. ವೆಂಟಿಲೇಟ‌ರ್ ನಲ್ಲಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಟಿ.ಪಿ.ಮಾಧವನ್ ಅವರು ‘ಕಲ್ಯಾಣ ರಾಮನ್’, ‘ಆಯಲ್ ಕದ ಎಳುತ್ತುಕಾಯನು’, ‘ನಾರಿಮನ್’ ಮತ್ತು ‘ಪುಲಿವಾಲ್ ಕಲ್ಯಾಣಂ’ ಸಿನಿಮಾಗಳಲ್ಲಿನ ಪಾತ್ರಗಳ ಮೂಲಕವೇ ಅಪಾರ ಜನಮನ್ನಣೆ ಗಳಿಸಿದ ನಟ. ಹಲವಾರು ಮಲಯಾಳಂ ಟಿವಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದ ಅವರು, ನೆನಪಿನ ಶಕ್ತಿ ಕಳೆದುಕೊಂಡ ಕಾರಣ ನಟನಾ ವೃತ್ತಿಯಿಂದ ದೂರ ಉಳಿದರು,(ಏಜೆನ್ಸಿಸ್).


Leave a Reply

Your email address will not be published. Required fields are marked *