ಕಾಸರಗೋಡು: ಮಹಿಳೆ ತನ್ನ ಪತಿಯ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಸುಳ್ಯ ಜಯನಗರದ ದಿವಂಗತ ಇಸ್ಮಾಯಿಲ್ ಮತ್ತು ಖದೀಜಾ ದಂಪತಿಯ ಪುತ್ರಿ ಹಾಗೂ ಪೊವ್ವಾಲ್‌ನ ಮಾಹಿನ್ ಕುಟ್ಟಿಯ ಎರಡನೇ ಮಗ ವಾಚ್ ಅಂಗಡಿ ಮಾಲೀಕ ಜಾಫರ್ ಅವರ ಪತ್ನಿ ಶೈಮಾ (35) ಮೃತರು. ಹುಟ್ಟಿದ ಐದೂ ಮಕ್ಕಳು ಹೆಣ್ಣು ಮಕ್ಕಳೆಂಬ ಕಾರಣಕ್ಕೆ ಯುವತಿಗೆ ಆಕೆಯ ಪತಿ ಜಾಫರ್ ಅಮಾನುಷವಾಗಿ ಥಳಿಸಿದ್ದಾನೆ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಬುಧವಾರ ಬೆಳಗ್ಗೆ ಪೊವ್ವಲ್‌ನಲ್ಲಿರುವ ತಮ್ಮ ಕ್ವಾರ್ಟರ್ಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ ಹದಿಮೂರು, ಎಂಟು, ಆರು, ಐದು ಮತ್ತು ಮೂರು ವರ್ಷದ ಐದು ಹೆಣ್ಣು ಮಕ್ಕಳಿದ್ದಾರೆ. ಪತಿ ಜಾಫರ್ ನಿತ್ಯವೂ ಮದ್ಯ ಸೇವಿಸಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದು, ಪತಿ ವಿರುದ್ಧ ದೂರ ನೀಡಬೇಕೆಂದು ಸಂಬಂಧಿಕರು ತಿಳಿಸಿದಾಗ, ಮಕ್ಕಳ ಹಿತದೃಷ್ಟಿಯಿಂದ ಈ ಬಗ್ಗೆ ದೂರು ನೀಡಲು ಒಪ್ಪುತ್ತಿಲ್ಲ ಎಂದು ಶೈಮಾ ಹೇಳಿರುವುದಾಗಿ ಶೈಮಾ ಸಂಬಂಧಿ ಅಶ್ರಫ್ ಸುದ್ದಿಗೆ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಶೈಮಾಗೆ ಮನೆಯವರು ನೀಡಿದ 40ಪವನ್ ಚಿನ್ನ ಹಾಗೂ ₹2 ಲಕ್ಷ ದಲ್ಲಿ ಪತಿ ಹೊಸ ಮನೆ ಕಟ್ಟಿದ್ದರು. ಶೈಮಾಳನ್ನು ಮನೆಯವರಿಂದ ಹೆಚ್ಚು ಚಿನ್ನ ಖರೀದಿಸುವಂತೆ ಹೇಳಿ ಅಮಾನುಷವಾಗಿ ಥಳಿಸುತ್ತಿದ್ದರು ಮತ್ತು ಐದು ವರ್ಷಗಳ ಕಾಲ ಆಕೆ ತೀವ್ರ ಚಿತ್ರಹಿಂಸೆ ಅನುಭವಿಸಬೇಕಾಯಿತು ಎಂದು ಯುವತಿಯ ಸಂಬಂಧಿಕರು ಹೇಳಿದ್ದಾರೆ.
ಹೊಸ ಮನೆಯಲ್ಲಿ ವಾಸವಾಗಿದ್ದ ಶೈಮಾ ಮತ್ತು ಅವರ ಮಕ್ಕಳನ್ನು ಒಂದೂವರೆ ತಿಂಗಳ ಹಿಂದೆ ಸಮೀಪದ ಕ್ವಾರ್ಟರ್ಸ್‌ಗೆ ಸ್ಥಳಾಂತರಿಸಿ ಹೊಸ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಲಾಗಿತ್ತು. ಎರಡು ತಿಂಗಳ ಹಿಂದೆ ಮೃತ ಶೈಮಾ ತಲೆಯನ್ನು ಗೋಡೆಗೆ ಬಡಿದು ತಲೆಗೆ ತೀವ್ರ ಪೆಟ್ಟಾಗಿತ್ತು ಎಂದು ಇದೇ ಸಂಧರ್ಭ ಸಂಬಂಧಿಕರು ತಿಳಿಸಿದ್ದಾರೆ. ಮಹಿಳೆಯ ಮನೆಯವರು ಬರುತ್ತಾರೆಯೇ ಎಂದು ನೋಡಲು ಆಕೆಯ ಪತಿ ಜಾಫರ್ ವಾಸಿಸುವ ಕ್ವಾರ್ಟರ್ಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು ಎಂದು ಶೈಮಾ ಸಂಬಂಧಿಕರು ತಿಳಿಸಿದ್ದಾರೆ.
ಪತಿ ತಡರಾತ್ರಿ ಕುಡಿದು ಮನೆಗೆ ಬರುತ್ತಿದ್ದನು ದಿನನಿತ್ಯ ಹಿಂಸಿಸುತ್ತಿದ್ದನು, ಕಳೆದ ಭಾನುವಾರ ಕೂಡ ಯುವತಿ ತನ್ನ ತಾಯಿಗೆ ಕರೆ ಮಾಡಿ ಹೀಗೆ ಅಳಲು ತೋಡಿದ್ದಳು, ತಾನು ಬದುಕಲು ಸಾಧ್ಯವಿಲ್ಲ, ಬದುಕಬೇಕಾದರೆ ಚಿನ್ನ ಕೊಡಬೇಕು, ನಿನ್ನನ್ನು ಇಂಚಿಂಚಾಗಿ ಸಾಯಿಸುತ್ತೇನೆ ಎಂದು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮಾಧ್ಯಮಕ್ಕೆ ಸಂಬಂಧಿಕರು ತಿಳಿಸಿದ್ದಾರೆ. ಆದರೆ ಶೈಮಾಳ ಕುಟುಂಬಸ್ಥರು ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆದೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಹಿಳೆಯ ಸಾವಿನ ನಂತರ ಪತಿ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.