ಸುಳ್ಯ: ಇಲ್ಲಿನ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಇವುಗಳ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಹಲವು ವೈದಿಕ – ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿದ ಶ್ರೀ ಶಾರದಾಂಬ ಉತ್ಸವದ ಶೋಭಾಯಾತ್ರೆಯು ಸುಳ್ಯದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದವು, ಆಕರ್ಷಕ ಸ್ಥಬ್ಧಚಿತ್ರಗಳು ಶೋಭಾಯಾತ್ರೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು.
ಶೋಭಾಯಾತ್ರೆಯಲ್ಲಿ ಕಾರ್ಗಿಲ್ ಬಾಯ್ಸ್ ತಂಡದ ಮತ್ರ್ಯಾವತಾರದ ಟ್ಯಾಬ್ಲೊ, ಧ್ವನಿ ಬೆಳಕು ಶಾಮಿಯಾನದ ಕೇರಳ ಶೈಲಿಯ ನೃತ್ಯ ಟ್ಯಾಬ್ಲೊ, ಟೀಂ ಜಟಾಯು ತಂಡದ ನವರಾತ್ರಿ ವಿಶೇಷ ಟ್ಯಾಬ್ಲೊ, ಡಿ.ಜೆ. ಫ್ರೆಂಡ್ಸ್ ಹುಲಿವೇಷ ಕುಣಿತ, ಕೇರ್ಪಳ ದುರ್ಗಾಪರಮೇಶ್ವರಿ ಕುಣಿತ ಭಜನಾ ತಂಡ, ವಿಷ್ಣುಸರ್ಕಲ್ ವೀರಕೇಸರಿ ಶ್ರೀರಾಮ ಹನುಮಂತನ ಟ್ಯಾಬ್ಲೊ, ಮಂಜು ಬ್ರದರ್ಸ್ ನೃತ್ಯ ಟ್ಯಾಬೋ, ಗಜಕೇಸರಿಯ ಟ್ಯಾಬ್ಲೊ, ಅರಣ್ಯ ಇಲಾಖೆಯ ಕಾಡುಸಂರಕ್ಷಣಾ ಟ್ಯಾಬ್ಲೊ ಸೇರಿದಂತೆ ಇನ್ನಿತರ ಟ್ಯಾಬ್ಲೊಗಳು ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.