ಉಡುಪಿ ನವೆಂಬರ್ 12: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಒಂದು ವರ್ಷ, ಕಳೆದ ವರ್ಷ ಇದೇ ದಿನ ಎಂದಿನಂತೆ ಇದ್ದಿದ್ದ ಉಡುಪಿ ಜಿಲ್ಲೆಯಲ್ಲಿ ಈ ಘಟನೆ ಎಲ್ಲರನ್ನೂ ದಿಗ್ಬ್ರಮೆಗೆ ದೂಡಿತ್ತು. ಬುದ್ದಿವಂತರ ಜಿಲ್ಲೆಯಲ್ಲಿ ಈ ರೀತಿಯ ಹತ್ಯಾಕಾಂಡ ನಡೆದಿದೆ ಎನ್ನವುದನ್ನು ಜನರು ನಂಬದ ಸ್ಥಿತಿಯಲ್ಲಿದ್ದರು. ಆದರೆ ಘಟನೆ ನಡೆದಿದೆ. ಅಂದು ಎಲ್ಲೆಡೆ ದೀಪಾವಳಿಯ ಸಂಭ್ರಮ. ಆದರೆ ಆ ದಿನ ಆ ಮನೆಯಲ್ಲಿ ಮಾತ್ರ ರಕ್ತದ ಹೋಕುಳಿಯೇ ಹರಿದಿತ್ತು. ಕೊಲೆಗಡುಕನ ವಿಕೃತ ಮನಸ್ಸಿಗೆ ಒಬ್ಬರಲ್ಲ, ಇಬ್ಬರಲ್ಲ ಒಂದೇ ಕುಟುಂಬ ನಾಲ್ವರು ಹೆಣವಾಗಿ ಬಿದ್ದಿದ್ದರು. ಇದು 2023ರ ನ.12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್ನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಭೀಕರತೆಗೆ ಒಂದು ವರ್ಷ ತುಂಬಿದೆ.ಸಂಸಾರಿಯಾಗಿದ್ದ ಆರೋಪಿ ಪ್ರವೀಣ್ ಅರುಣ್ ಚೌಗುಲೆ (40) ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾನೆ. ಹಸೀನಾ , ಐನಾಜ್ , ಅಫ್ನಾನ್ , ಆಸೀಂ ಹತ್ಯೆಯಾದವರು.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ಪ್ರೆಸ್ ಸಂಸ್ಥೆಯಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಜಾರಿನ ನೂರ್ ಮುಹಮ್ಮದ್ರ ಪುತ್ರಿ ಐನಾಝ್(21)ಳ ಮೇಲಿನ ಅತೀಯಾದ ವ್ಯಾಮೋಹದಿಂದ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್ ಪ್ರದೀಪ್ ಚೌಗುಲೆ(40) ನವೆಂಬರ್.12ರಂದು ಕೊಲೆಗೆ ಯೋಜನೆ ರೂಪಿಸಿದ್ದನು. ಅದೇ ರೀತಿ ಯಾವುದೇ ಸುಳಿವು ಲಭಿಸದಂತೆ ತನ್ನ ಕಾರನ್ನು ಹೆಜಮಾಡಿ ಟೋಲ್ಗೆ ಮೊದಲೇ ನಿಲ್ಲಿಸಿ, ಅಟೊ, ಬಸ್, ಬೈಕ್ಗಳ ಮೂಲಕ ನೇಜಾರು ತಲುಪಿದ್ದನು. ಅಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ಐನಾಝ್ ಮನೆಯೊಳಗೆ ಹೋದ ಪ್ರವೀಣ್, ಐನಾಝ್ ಮತ್ತು ತಡೆಯಲು ಬಂದ ಆಕೆಯ ತಾಯಿ ಹಸೀನಾ(48), ಅಕ್ಕ ಅಫ್ನಾನ್(23) ಹಾಗೂ ತಮ್ಮ ಆಸೀಮ್(13)ನನ್ನು ಬರ್ಬರವಾಗಿ ಚೂರಿಯಿಂದ ಕೊಲೆಗೈದು ಪರಾರಿಯಾಗಿದ್ದನು. ಮನೆಯಲ್ಲಿದ್ದ ಹಸೀನಾರ ಅತ್ತೆ ಹಾಜಿರಾ(80) ಚೂರಿ ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ.14ರಂದು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.ಪತ್ನಿ- ಮೂವರು ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬ ಇನ್ನೂ ಆ ಶಾಕ್‌ನಿಂದ ಅ ಹೊರಬಂದಿಲ್ಲ. ನಿತ್ಯವೂ ಈ ಕಹಿ ಘಟನೆಯ ನೆನಪು ಬೆಂಬಿಡದೇ ಕಾಡುತ್ತಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗುವುದನ್ನು ಎದುರು ನೋಡುತ್ತಿದೆ. . ಈ ಘಟನೆ ಸಂಭವಿಸಿ ನವೆಂಬರ್ 12ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ದುಷ್ಕರ್ಮಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಕ್ರ್ಯೂ ಪ್ರವೀಣ್ ಅರುಣ್ ಚೌಗುಲೆ ಪ್ರಕರಣದಿಂದ ಪಾರಾಗುವುದಕ್ಕೆ ಪ್ರಯತ್ನಿಸುತ್ತಿದ್ದಾನೆ. ಪ್ರಕರಣದ ತನಿಖೆಯನ್ನು ಅನಗತ್ಯವಾಗಿ ವಿಳಂಬ ಮಾಡುವ ಸಲುವಾಗಿ ಹಂತಕ ಪ್ರವೀಣ್ ಅರುಣ್ ಚೌಗುಲೆ ಜೈಲಿನಲ್ಲಿ ಇದ್ದುಕೊಂಡೇ ನಾನಾ ಪ್ಯಾನ್‌ಗಳನ್ನು ರೂಪಿಸುತ್ತಿದ್ದಾನೆ. ಜೀವ ಬೆದರಿಕೆ ಕಾರಣ ಕೊಟ್ಟು ಸಾಕ್ಷಿಗಳ ವಿಚಾರಣೆಯನ್ನೇ ಆರು ತಿಂಗಳ ಕಾಲ ಮುಂದೂಡಿ ಪ್ರಕರಣದ ಬಿಸಿ ತಣಿಸುವುದಕ್ಕೆ ಮುಂದಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳ ವಿಚಾರಣೆ ಮೇ ತಿಂಗಳಿನಲ್ಲೇ ನಿಗದಿಯಾಗಿತ್ತು. ಆರೋಪಿ ಅರುಣ್ ಕೃತ್ಯ ನಡೆದ ಸ್ಥಳ ಮಹಜರು ಸಮಯದಲ್ಲಿ ತನ್ನ ಮೇಲಾದ ದಾಳಿ ಯತ್ನದ ಎಫ್‌ಐಆರ್ ಅನ್ನೇ ಮುಂದಿಟ್ಟುಕೊಂಡು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ಉಡುಪಿಯಲ್ಲಿ ನಡೆದರೆ ನನಗೆ ಜೀವ ಬೆದರಿಕೆ ಇದ್ದು, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿ ಕೇಳಿಕೊಂಡಿದ್ದ. ಈ ಬಗ್ಗೆ ಸಾಕಷ್ಟು ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣದ ಗಂಭೀರತೆ ಅರಿತು ಆರೋಪಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಜಿಲ್ಲೆಯ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸಾಕ್ಷಿಗಳ ವಿಚಾರಣೆಗೆ ನ.20, 21ಕ್ಕೆ ದಿನ ನಿಗದಿಪಡಿಸಿದೆ. ನ.21ರಂದು 1 ಮತ್ತು 2ನೇ ಸಾಕ್ಷಿ, ನ.21ರಂದು 3 ಮತ್ತು 4ನೇ ಸಾಕ್ಷಿಗಳ ವಿಚಾರಣೆ ನಡೆಯಲಿದೆ” ಎಂದು ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ತಿಳಿಸಿದ್ದಾರೆ.
ತಾಯಿ ಹಾಗೂ ಮೂವರು ಮಕ್ಕಳ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಈ ರೀತಿಯ ಭೀಕರ ಹತ್ಯೆ ಮೊದಲ ಬಾರಿಗೆ ನಡೆದಿದ್ದು, ಆತಂಕವೇ ಸೃಷ್ಟಿಯಾಗಿತ್ತು.