ಸುಳ್ಯ : ಕಳೆದ ಮೂರು ದಿನಗಳ ಹಿಂದೆ ಗುರುಂಪು ಅಂಗನವಾಡಿ ಕೇಂದ್ರದ ಸಮೀಪ ಇಬ್ಬರು ಶಾಲಾ ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದ ವೇಳೆ ಹಠಾತ್ ಬೀದಿ ನಾಯಿ ದಾಳಿಮಾಡಿ ವಿದ್ಯಾರ್ಥಿನಿಯ ಕಾಲಿಗೆ ಕಚ್ಚಿ ಗಾಯಮಾಡಿದೆ ಗಾಯ ವಾಸಿಯಾಗುವ ತನಕ ಶಾಲೆಗೆ ಅನಿವಾರ್ಯ ವಾಗಿ ರಜೆ ಹಾಕಬೇಕಾದ ಪರಿಸ್ಥಿತಿ ವಿದ್ಯಾರ್ಥಿನಿ ಗೆ ಒದಗಿ ಬಂದಿದೆ. ಇಪ್ಪತ್ತು ದಿನ ಮೊದಲು ಸುಳ್ಯ ಜಯನಗರ ದಲ್ಲಿ ಶಾಲಾ ವಿದ್ಯಾರ್ಥಿಯನ್ನು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿದೆ. ಎರಡು ತಿಂಗಳ ಹಿಂದೆ ಶಾಂತಿನಗರದಲ್ಲಿ ಓರ್ವ ಕಾರ್ಮಿಕನ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿದೆ. ಸುಮಾರು 6 ತಿಂಗಳ ಮೊದಲು ನಾವೂರಿನಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಯುವ ಕಾರ್ಮಿಕನ ಮೇಲೆ ಬೀದಿ ನಾಯಿ ತೀವ್ರ ಸ್ವರೂಪದ ದಾಳಿ ಮಾಡಿತ್ತು. ಕೆಲ ದಿನಗಳ ಹಿಂದೆ ಶಾಂತಿನಗರದಲ್ಲಿ ಬೈಕ್ ಚಲಾಯಿಸುತ್ತಿದ್ದ ವಿದ್ಯಾರ್ಥಿಗೆ ನಾಯಿ ದಾಳಿ ನಡೆಸಲು ಮುಂದಾಗಿ ಪರಿಣಾಮ ಬೈಕ್ ನಿಂದ ಬಿದ್ದು ಮಖಕ್ಕೆ ಪೆಟ್ಟಾದ ಪ್ರಸಂಗ ಕೂಡಾ ನಡೆದಿತ್ತು. ಇವೆಲ್ಲವೂ ವಿವಿಧ ಮಾಧ್ಯಮಗಳು ವರದಿ ಮಾಡಿತ್ತಾದರೂ ಯಾವುದೇ ಪ್ರಯೋಜನವಿಲ್ಲ ಎಂಬಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕಾಗಿದೆ.