ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯ ಮೇಲೆ ಅದೇನೋ ವ್ಯಾಮೋಹ.
ಓದಲು-ಅರ್ಥಮಾಡಿಕೊಳ್ಳಲು ಬರಲಿ-ಬಾರದೇ ಇರಲಿ, ಅಂಗಡಿಗಳ ನಾಮಫಲಕದಿಂದ ಆರಂಭಿಸಿ ಮದುವೆ ಆಮಂತ್ರಣ ಪತ್ರಿಕೆಯಾದಿಯಾಗಿ, ಸಭಾಂಗಣಗಳು, ಹೆಸರೂ ಸಹ ಎಲ್ಲವೂ ಬಹುತೇಕ ಇಂಗ್ಲಿಷ್ ಮಯ.
ಆದರೆ…
ಇಂದು ಆತ್ಮೀಯ ಸ್ನೇಹಿತ ಇಕ್ಬಾಲ್ ಕನಕಮಜಲು ಅವರು ಸುಳ್ಯದ ಮುಸ್ಲಿಂ ಸಮುದಾಯದ ಹೆಮ್ಮೆಯ ಪ್ರತೀಕವಾಗಿ ತಲೆ ಎತ್ತಿನಿಂತಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನ ಭಾವಚಿತ್ರವನ್ನು ಕಳುಹಿಸಿದ್ದರು.
ಅವರು ಪ್ರತಿನಿತ್ಯ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಈ ಭಾವಚಿತ್ರದಲ್ಲಿ ವಿಶೇಷವಾಗಿ ಏನೂ ಇಲ್ಲ ಎಂದು ಅಂದುಕೊಂಡಿದ್ದೆ. ಆದರೆ ಆಡಿಟೋರಿಯಂ ನ ಹೊರಗಡೆ ನಾಮಫಲಕವನ್ನು ಅಳವಡಿಸುವ ಫೋಟೋ ಅದಾಗಿತ್ತು. ಅದರಲ್ಲಿ ಹಸಿರು ಬಣ್ಣದಲ್ಲಿ ಕನ್ನಡದಲ್ಲಿ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಎಂಬುದನ್ನು ಕಂಡಾಗ ಆದ ಸಂತೋಷವನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ.
ನಾವು ಇಲ್ಲಿ ರಾಜ್ಯದ ರಾಜಧಾನಿಯಲ್ಲಿ ಕನ್ನಡವನ್ನು ಬಳಸಿ-ಬೆಳಸಿ-ಉಳಿಸಿ ಎಂದು ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ಇರುವಾಗ, ಊರಿನಲ್ಲಿ ಯಾರ ಸಲಹೆ-ಸೂಚನೆ ಇಲ್ಲದಿದ್ದರೂ ಸಹ, ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಎಂದು ಕನ್ನಡದಲ್ಲೂ ಶಾಶ್ವತವಾಗಿ ರಾರಾಜಿಸುವಂತೆ ಮಾಡಿದ್ದು ಅತ್ಯಂತ ಸ್ತುತ್ಯರ್ಹ, ಅಭಿನಂದನಾರ್ಹ ಕಾರ್ಯ.
ನೀವು ಕನ್ನಡದ ಮೇಲೆ ತೋರಿದ ಪ್ರೀತಿಗಾಗಿ ಮತ್ತೊಮ್ಮೆ ಪ್ರೀತಿಯ ಪ್ರಣಾಮಗಳು.