ಡಿಸೆಂಬರ್ 14: ಗಂಡುಕಲೆ ಯಕ್ಷಗಾನ ರಂಗದ ಮೊದಲ ಮಹಿಳಾ ವೃತ್ತಿಪರ ಭಾಗವತರಾಗಿ ಗುರುತಿಸಿಕೊಂಡಿದ್ದ ಲೀಲಾವತಿ ಬೈಪಡಿತ್ತಾಯ ಅವರು ನಿಧನರಾಗಿದ್ದಾರೆ. ಕೇರಳದ ಕಾಸರಗೋಡಿನ ಮಧೂರಿನಲ್ಲಿ ಜನಿಸಿದ ಲೀಲಾವತಿ ಅವರು ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿ.
ಲೀಲಾವತಿ ಬೈಪಾಡಿತ್ತಾಯ ಅವರು ಸುಮಾರು ನಾಲ್ಕು ದಶಕಗಳ ಕಾಲ ಭಾಗವತರಾಗಿ ಮನೆಮಾತಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ 2010ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. 2012ರಲ್ಲಿ ಕರ್ನಾಟಕ ಸರಕಾರದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹತ್ತು ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಭಾಗವತಿಕೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಕಟೀಲು, ಮೂಡುಬಿದಿರೆ ಹಾಗೂ ತಮ್ಮದೇ ಮನೆಯಲ್ಲಿ ಹಲವು ಮಂದಿಗೆ ಭಾಗವತಿಕೆ ಹೇಳಿಕೊಟ್ಟಿದ್ದಾರೆ. ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತೆ ಎಂಬ ಖ್ಯಾತಿ ಅವರದ್ದಾಗಿತ್ತು.ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮೇಳಗಳಲ್ಲಿಯೂ ಭಾಗವತಿಕೆ ಮಾಡಿದ್ದರು.