ಡಬ್ಲ್ಯುಡಬ್ಲ್ಯುಇ ದಿಗ್ಗಜ, ಭಾರತೀಯರ ಫೇವರೆಟ್‌ ರಸ್ಲರ್‌ ಜಾನ್ ಸೆನಾ. ಸುದೀರ್ಘ ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸಿರುವ ಜಾನ್‌, ಇದೀಗ ನಿವೃತ್ತಿ ಕುರಿತು ಮಾತನಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇನ್ ರಿಂಗ್ ಸ್ಪರ್ಧೆಯಿಂದ ಅವರು ನಿವೃತ್ತಿ ಘೋಷಿಸಿದ್ದಾರೆ. 16 ಬಾರಿಯ ಚಾಂಪಿಯನ್ 47 ವರ್ಷದ ಸೆನಾ, ಕೆನಡಾದ ಮನಿ ಇನ್ ದಿ ಬ್ಯಾಂಕ್ ಪೇ ಪರ್ ವ್ಯೂನಲ್ಲಿ ಆಶ್ಚರ್ಯಕರವಾಗಿ ಕಾಣಿಸಿಕೊಂಡರು. ಅಲ್ಲಿ ಮಾತನಾಡಿದ ಅವರು, 2025ನೇ ವರ್ಷವು ವೃತ್ತಿಪರ ಕುಸ್ತಿಯಲ್ಲಿ ತಮ್ಮ ಕೊನೆಯ ವರ್ಷವಾಗಲಿದೆ ಎಂದು ಬಹಿರಂಗಪಡಿಸಿದರು. ಅಲ್ಲಿ ಅವರು ವರ್ಷದ ಮೊದಲ RAW ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ. ಲಾಸ್ ವೇಗಸ್‌ನಲ್ಲಿ ತಮ್ಮ ಕೊನೆಯ ಡಬ್ಲ್ಯುಡಬ್ಲ್ಯುಇ ರಸಲ್‌ಮೇನಿಯಾ ಪಂದ್ಯವನ್ನು ಜಾನ್‌ ಆಡಲಿದ್ದಾರೆ.

ಸೆನಾ ಅವರ ನಿವೃತ್ತಿಯು ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಲಿದೆ. ಸುದೀರ್ಘ ವರ್ಷಗಳಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಜಾನ್, 23 ವರ್ಷಗಳ ಸುದೀರ್ಘ ಪರಂಪರೆಗೆ ತೆರೆ ಎಳೆಯಲಿದ್ದಾರೆ. ಈ ಸುದೀರ್ಘ ಅವಧಿಯ ವೃತ್ತಿ ಬದುಕಿನಲ್ಲಿ ಅವರು 13 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್ಶಿಪ್ ಮತ್ತು ಮೂರು ವಿಭಿನ್ನ ಸಂದರ್ಭಗಳಲ್ಲಿ ವಿಶ್ವ ಹೆವಿವೇಯ್ಟ್ ಪ್ರಶಸ್ತಿ ಗೆದ್ದಿದ್ದಾರೆ.

“ಇಂದು ರಾತ್ರಿ ನಾನು ಅಧಿಕೃತವಾಗಿ ಡಬ್ಲ್ಯುಡಬ್ಲ್ಯುಇಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಅವರು ಜಾನ್‌ ಸೆನಾ ತಮ್ಮ ವೃತ್ತಿಜೀವನದ ಅತ್ಯಂತ ಅಚ್ಚರಿಯ ಅಂಶವನ್ನು ಹೇಳಿದರು.

ಡಬ್ಲ್ಯುಡಬ್ಲ್ಯುಇ ಕ್ರಿಯೇಟಿವ್ ಮುಖ್ಯಸ್ಥ ಪಾಲ್ ‘ಟ್ರಿಪಲ್ ಎಚ್’ ಲೆವೆಸ್ಕ್ ಅವರು ಮತ್ತು ಸೆನಾ ಅವರು ವೇದಿಕೆಯ ಹಿಂದೆ ಪರಸ್ಪರ ತಬ್ಬಿಕೊಳ್ಳುವ ಸಣ್ಣ ದೃಶ್ಯವನ್ನು‌ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅವರು ‘ಸಾರ್ವಕಾಲಿಕ ಶ್ರೇಷ್ಠ (The Greatest of All Time)’ ಎಂಬ ಶೀರ್ಷಿಕೆ ನೀಡಿದ್ದಾರೆ.

2018ರಿಂದ ಸೆನಾ ಅರೆಕಾಲಿಕ ಪ್ರದರ್ಶನ ನೀಡಲು ಮುಂದಾಗಿದ್ದರು. ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಈಗೀಗ ಅವರು ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊನೆಯ ಬಾರಿಗೆ ಅವರು 2023ರಲ್ಲಿ ಸೋಲೊ ಸಿಕೋವಾ ವಿರುದ್ಧ ಕಣಕ್ಕಿಳಿದಿದ್ದರು. ಅಲ್ಲಿ ನಿರಾಶಾದಾಯಕ ಸೋಲು ಕಂಡಿದ್ದರು.

ಕಳೆದ ಐದು ವರ್ಷಗಳಿಂದ ಸೆನಾ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿಲ್ಲ. 2017ರಲ್ಲಿ ಕೊನೆಯ ಬಾರಿಗೆ ರಸೆಲ್‌ಮೇನಿಯಾ ಗೆದ್ದಿದ್ದರು. ಅಂದಿನಿಂದ, ಸೆನಾ ಮೇನಿಯಾ 36, ಮೇನಿಯಾ 37 ಮತ್ತು 38ರಲ್ಲೂ ಸೋತಿದ್ದಾರೆ.

ಜಾನ್ ಸೆನಾ ವೃತ್ತಿಬದುಕು

2001ರಲ್ಲಿ ಜಾನ್‌ ಸೆನಾ ಡಬ್ಲ್ಯೂಡಬ್ಲ್ಯೂಇಗೆ ಪದಾರ್ಪಣೆ ಮಾಡಿದರು. ಆಗ ಓಹಿಯೋ ವ್ಯಾಲಿ ಕುಸ್ತಿಯೊಂದಿಗೆ ವೃತ್ತಿಜೀವನ ಆರಂಭಿಸಿದರು. ರ್ಯಾಂಡಿ ಆರ್ಟನ್, ಡೇವ್ ಬಾಟಿಸ್ಟಾ ಮತ್ತು ಬ್ರಾಕ್ ಲೆಸ್ನರ್ ಅವರೊಂದಿಗೆ ಒಂದೇ ಬ್ಯಾಚ್‌ನಲ್ಲಿದ್ದರು. ಸೆನಾ ರಸಲ್ಮೇನಿಯಾ 20ರಲ್ಲಿ ಯುಎಸ್ ಚಾಂಪಿಯನ್ಶಿಪ್ ಗೆದ್ದರು. ದಿ ಬಿಗ್ ಶೋ ಪಾಲ್ ವೈಟ್ ಅವರನ್ನು ಸೋಲಿಸಿದರು. 2006 ಮತ್ತು 2007ರಲ್ಲಿ ಸತತ ರೆಸಲ್‌ಮೇನಿಯಾದಲ್ಲಿ ಟ್ರಿಪಲ್ ಎಚ್ ಮತ್ತು ಹಾರ್ಟ್ ಬ್ರೇಕ್ ಕಿಡ್ ಶಾನ್ ಮೈಕೆಲ್ಸ್ ಅವರನ್ನು ಸೋಲಿಸಿದರು. 2018ರಿಂದ ಸಿಂಗಲ್ಸ್ ಪಂದ್ಯವನ್ನು ಗೆಲ್ಲದ ಸೆನಾ, ನಿವೃತ್ತಿಯ ನಂತರ ಪೂರ್ಣಕಾಲಿಕ ಚಲನಚಿತ್ರ ತಾರೆಯಾಗಿ ಬದಲಾಗುವ ಸಾಧ್ಯತೆಯಿದೆ. ಈಗಾಗಲೇ ಅವರು ದಿ ಪೀಸ್ ಮೇಕರ್, ಫಾಸ್ಟ್ & ಫ್ಯೂರಿಯಸ್ ಎಫ್ 9, ಸೂಸೈಡ್ ಸ್ಕ್ವಾಡ್, ಬಂಬಲ್ಬೀ, ದಿ ಹಿಡನ್ ಸ್ಟ್ರೈಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *