ಬೆಂಗಳೂರು, ಜುಲೈ.09: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್ ಮೇಲೆ ಎಫ್ಐಆರ್ ದಾಖಲಾಗಿದೆ. ರಾತ್ರಿ ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನೆಲೆ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ (One8 Commune Pub) ಮೇಲೆ ಕಬ್ಬನ್ಪಾರ್ಕ್ ಠಾಣೆಯಲ್ಲಿ FIR ದಾಖಲಾಗಿದೆ. ಸರ್ಕಾರ ನಿಗದಿಪಡಿಸಿರುವ ನಿಯಮವನ್ನು ಗಾಳಿಗೆ ತೂರಿ ತಡರಾತ್ರಿ ವರೆಗೂ ಪಬ್ ತೆರೆದು ಪಾರ್ಟಿಗೆ ಅನುವು ಮಾಡಿಕೊಟ್ಟ ರೆಸ್ಟೋರೆಂಟ್, ಬಾರ್, ಪಬ್ ವಿರುದ್ಧ ಜು.6ರ ರಾತ್ರಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ, ರಾತ್ರಿ 1.20ರವರೆಗೂ ಪಬ್ ಓಪನ್ ಮಾಡಿದ್ದ ಆರೋಪದಡಿ ನಗರದ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್, ಚರ್ಚ್ ಸ್ಟ್ರೀಟ್‌ನಲ್ಲಿರುವ ಎಂಪೈರ್ ರೆಸ್ಟೋರೆಂಟ್, ಬ್ರಿಗೇಡ್ ರಸ್ತೆಯಲ್ಲಿರುವ ಪಾಂಜಿಯೋ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪಬ್ ಓಪನ್ ಆಗಿದ್ದ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಪಬ್ನಲ್ಲಿ ಗ್ರಾಹಕರು ಇದ್ದರು. ನಿಯಮ ಉಲ್ಲಂಘಿಸಿ ರಾತ್ರಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ‌ ಶೇಖರ್ ಹೆಚ್.ಟಿ. ಪ್ರತಿಕ್ರಿಯೆ ನೀಡಿದ್ದು ಸರ್ಕಾರ ನಿಗದಿ ಪಡಿಸಿದ ಅವಧಿ ಉಲ್ಲಂಘಿಸಿ ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒನ್ 8 ಕಮ್ಯೂನ್ ಮಾತ್ರವಲ್ಲದೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಕೇಂದ್ರ ವಿಭಾಗದ ಇನ್ನೂ ಕೆಲ ರೆಸ್ಟೋರೆಂಟ್ ಹಾಗೂ ಪಬ್ ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *