ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ 10 ವರ್ಷದ ಬಾಲಕನೋರ್ವನ ಸಮಯಪ್ರಜ್ಞೆಯಿಂದ ಸ್ಥಳೀಯರ ಸಹಾಯದಿಂದಾಗಿ ಇತರರನ್ನು ರಕ್ಷಿಸಿದ ಘಟನೆ ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಬಳಿಯ ಕಾಪು ಎಂಬಲ್ಲಿ ಗುರುವಾರ ಬೆಳಗ್ಗೆ 5.45ರಿಂದ 6 ಗಂಟೆ ಸುಮಾರಿಗೆ ನಡೆದಿದೆ.

ಮುಂಡೂರಿನಲ್ಲಿ ನಡೆದಿದ್ದ ಒತ್ತೆಕೋಲದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಚಾಲಕ ನಿದ್ದೆ ಮಂಪರಿಗೆ ಒಳಗಾಗಿ ಕಾರು ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ ಸೇಡಿಯಾಪು ಜಂಕ್ಷನ್‌ನಿಂದ 250 ಮೀ. ದೂರದ ಕಾವು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ ಬಿದ್ದಿದೆ. ಕಾರು ಕಾಲುವೆ ಒಳಗೆ ಸಿಲುಕಿದ್ದು, ಚಾಲಕನ ಬದಿಯ ಬಾಗಿಲು ಮೇಲ್ಮುಖವಾಗಿತ್ತು. ಮತ್ತೊಂದು ಬದಿ ಮಣ್ಣಿನಡಿಗೆ ಬಿದ್ದಿತ್ತು.

ಕಾರನ್ನು ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್ ಅವರು ಚಲಾಯಿಸುತ್ತಿದ್ದರು. ಹಾಗೂ ಕಾರಿನಲ್ಲಿ ಚರಣ್ ಅವರ ತಂದೆ, ಬಾವ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.

ಕಾರು 10 ಅಡಿ ಆಳಕ್ಕೆ ಬಿದ್ದ ತಕ್ಷಣ ಚರಣ್‌ನ ಅಕ್ಕನ ಮಗ, 5ನೇ ತರಗತಿ ವಿದ್ಯಾರ್ಥಿ ವನೀಶ್ ಕಷ್ಟಪಟ್ಟು ಬಾಗಿಲು ತೆರೆದು ಕಾರಿನಿಂದ ಹೊರ ಬಂದಿದ್ದಾನೆ. ಕಾರಿನಲ್ಲಿದ್ದ ಉಳಿದವರು ಹೊರ ಬರಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ವನೀಶ್ ಕೂಡ ಬಾಗಿಲು ತೆಗೆಯುವಲ್ಲಿ ವಿಫಲನಾದ. ನಂತರ ತಕ್ಷಣವೇ ಕಂದಕದಿಂದ ಮೇಲೆ ಬಂದು ಹೆದ್ದಾರಿಯಲ್ಲಿ ತೆರಳುತ್ತಿದ್ದ ವಾಹನವನ್ನು ನಿಲ್ಲಿಸಿ ಅವರ ಸಹಾಯಕ್ಕೆ ಕರೆದ. ಇವರ ಸಹಾಯದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *