ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗಾಗಿ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಯ ವೇಳೆ 1600 ಮೀಟರ್ ಓಟದಲ್ಲಿ ಯುವಕನೊಬ್ಬ ಬಿದ್ದು ಸಾವಿಗೀಡಾಗಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಯುವಕ ಕೊನೆಯುಸಿರೆಳೆದಿದ್ದಾನೆ.
ಮೃತ ಅಭ್ಯರ್ಥಿಯನ್ನು ಕೃಷ್ಣ ಜಿಲ್ಲೆಯ ಎ ಕೊಂಡೂರು ಗ್ರಾಮದ ಎನ್. ಚಂದ್ರಶೇಖರ್ (25) ಎಂದು ಗುರುತಿಸಲಾಗಿದೆ.
ಆಂಧ್ರ ಪ್ರದೇಶ ರಾಜ್ಯ ಮಟ್ಟದ ನೇಮಕಾತಿ ಮಂಡಳಿಯು ಕಳೆದ ಕೆಲವು ದಿನಗಳಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸುತ್ತಿದೆ. ಕೃಷ್ಣ ಜಿಲ್ಲೆಯ ಅಭ್ಯರ್ಥಿಗಳಿಗೆ ಪೊಲೀಸ್ ಪರ್ಲ್ಸ್ ಮೈದಾನ, ಲಕ್ಷ್ಮೀ ಟಾಕೀಸ್ ಸೆಂಟರ್ನಲ್ಲಿ ದೈಹಿಕ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿದೆ.
ಗುರುವಾರ ದೈಹಿಕ ಪರೀಕ್ಷೆ ಮಾಡುವಾಗ 1600 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಂದ್ರಶೇಖರ್ ಓಟದ ಮಧ್ಯೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಆತನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಆದರೆ, ವೈದ್ಯರು ಚಿಕಿತ್ಸೆ ನೀಡುತ್ತಿರುವಾಗಲೇ ಚಂದ್ರಶೇಖರ್ ಮೃತಪಟ್ಟಿದ್ದಾರೆ.
ಈ ಕಹಿ ಘಟನೆ ಚಂದ್ರಶೇಖರ್ ಪಾಲಕರನ್ನು ಕಣ್ಣೀರು ಹಾಕುವಂತೆ ಮಾಡಿದೆ. ಉದ್ಯೋಗ ಸಿಕ್ಕಿ ಸಂಸಾರಕ್ಕೆ ಆಸರೆಯಾಗಲಿದ್ದಾನೆ ಎಂದು ಪಾಲಕರು ಭಾವಿಸಿದ್ದರು. ಆದರೆ, ವಿಧಿಯಾಟದಿಂದ ಘೋರ ದುರಂತವೇ ಸಂಭವಿಸಿದೆ.