ನ್ಯಾಕ್ ಪರಿಶೀಲನಾ ಸಮಿತಿಯ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿರುವ ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ. ಗಾಯತ್ರಿ ದೇವರಾಜ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಗುರುವಾರ (ಫೆ.6) ನಡೆದ ದಾವಣಗೆರೆ ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ಗಾಯತ್ರಿ ಅವರನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

“ಕೆಸಿಎಸ್ಆರ್ ನಿಯಮಗಳ ಪ್ರಕಾರ ಪ್ರೊಫೆಸರ್ ಗಾಯತ್ರಿ ದೇವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ. ಆದೇಶದ ಪ್ರತಿಯನ್ನು ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಕಳುಹಿಸಲಾಗುವುದು” ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಬಿ.ಡಿ ಕುಂಬಾರ್ ತಿಳಿಸಿದ್ದಾಗಿ ವರದಿ ಹೇಳಿದೆ.

ನ್ಯಾಕ್ ಪರಿಶೀಲನಾ ಸಮಿತಿಯ ಸದಸ್ಯರೂ ಆಗಿರುವ ಗಾಯತ್ರಿ ಅವರನ್ನು ಇತ್ತೀಚೆಗೆ ಸಿಬಿಐ ಅಧಿಕಾರಿಗಳು ಲಂಚ ಸ್ವೀಕರಿಸಿದ ಆರೋಪದ ಮೇಲೆ ವಿಚಾರಣೆ ನಡೆಸಿ ಬಂಧಿಸಿದ್ದರು.

ಅಧಿಕಾರಿಗಳು ದಾವಣಗೆರೆ ನಗರದಲ್ಲಿರುವ ಪ್ರೊ. ಗಾಯತ್ರಿ ಅವರ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗಾಯತ್ರಿ ಅವರು ಈ ಹಿಂದೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ವಿದ್ಯಾ ಸಂಸ್ಥೆಗೆ ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪ್ರೊ.ಗಾಯತ್ರಿ ದೇವರಾಜ್ ಸೇರಿದಂತೆ ಹಲವರನ್ನು ಹೈದರಾಬಾದ್ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಗಾಯತ್ರಿ ಅವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (NAAC) ಏಳು ಸದಸ್ಯರ ಪರಿಶೀಲನೆ ತಂಡದ ಭಾಗವಾಗಿದ್ದರು.

ಬಂಧಿತ ವ್ಯಕ್ತಿಗಳಲ್ಲಿ ಪರಿಶೀಲನಾ ಸಮಿತಿಯ ಅಧ್ಯಕ್ಷ, ಆರು ಸದಸ್ಯರು ಮತ್ತು ಆಂಧ್ರ ಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಫ್) ಉಪಕುಲಪತಿ, ಇಬ್ಬರು ಕಾರ್ಯನಿರ್ವಾಹಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ಕೆಎಲ್‌ಇಎಫ್ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನ್ಯಾಕ್ ಪರಿಶೀಲನಾ ತಂಡದ ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ನ್ಯಾಕ್ ತಂಡದವರು ಕೆಎಲ್‌ಇಎಫ್ ಸಂಸ್ಥೆಗೆ ಅನುಕೂಲಕರವಾದ ರೇಟಿಂಗ್‌ ಮತ್ತು A++ ಮಾನ್ಯತೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *