ಬ್ಯಾಂಕ್ನಲ್ಲಿ ಪಡೆದ ಸಾಲವನ್ನು ವಸೂಲಿ ಮಾಡಲು ಬಂದ ಬ್ಯಾಂಕ್ ಉದ್ಯೋಗಿ ಜತೆ ವಿವಾಹಿತೆಯೊಬ್ಬಳು ಓಡಿಹೋಗಿ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಸಾಲದ ಹಣ ಪಡೆಯಲು ಬ್ಯಾಂಕ್ ಉದ್ಯೋಗಿ ಆಕೆಯ ಮೆನೆಗೆ ಹೋಗುತ್ತಿದ್ದನು. ಈ ಸಮಯದಲ್ಲಿ ಇಬ್ಬರು ಪ್ರೀತಿಗೆ ಸಿಲುಕಿದ್ದು, ಕಳೆದ 5 ತಿಂಗಳಿಂದ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.


ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಇವರ ವಿವಾಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಇಡೀ ಘಟನೆ ಮಂಗಳವಾರ(ಫೆ.11) ರಂದು ನಡೆದಿದೆ. ವಿವಾಹಿತ ಮಹಿಳೆ ಜುನಾಯಿ ಮುನ್ಸಿಪಾಲ್ ಕೌನ್ಸಿಲ್ನ ತ್ರೀಪುರಾರ್ ಸಿಂಗ್ ಘಾಟ್ನ ಇಂದ್ರ ಕುಮಾರಿ. ಇಲ್ಲಿನ ಲಚುವಾಲ್ ಪೊಲೀಸ್ಠಾಣೆ ವ್ಯಾಪ್ತಿಯ ಜಜ್ಜಾಲ್ ಗ್ರಾಮ ನಿವಾಸಿಯಾದ ಬ್ಯಾಂಕ್ ಉದ್ಯೋಗಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ತ್ರೀಪುರಾರ್ ಸಿಂಗ್ ಘಾಟ್ನ ಬಾಬಾ ಭೂಥೇಶ್ವರ್ನಾಥ್ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದಾರೆ.
ಬ್ಯಾಂಕ್ನಿಂದ ಸಾಲ ಪಡೆದಿದ್ದ ಮಹಿಳೆ..
ಪವನ್ ಕುಮಾರ್ ಬ್ಯಾಂಕಿನ ಆಕೌಂಟ್ ಸೆಕ್ಷನ್ನಲ್ಲಿ ಕೆಲಸ ಮಾಡುತ್ತಾನೆ. ವಿವಾಹಿತ ಮಹಿಳೆ ಇಂದ್ರ ಕುಮಾರಿ ಸಾಲ ಪಡೆದಿದ್ದರು. ಸಾಲ ವಸೂಲಾತಿಗಾಗಿ ಪವನ್ ಆಗಾಗ್ಗೆ ಇಂದ್ರಕುಮಾರಿ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಈ ಸಮಯದಲ್ಲಿ ಇಂದ್ರ ಕುಮಾರಿ ಪವನ್‌ನನ್ನು ಪ್ರೀತಿಸುತ್ತಿದ್ದಳು ಮತ್ತು ಇಬ್ಬರೂ ಮೊಬೈಲ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಅವರಿಬ್ಬರೂ ಸುಮಾರು ಐದು ತಿಂಗಳುಗಳ ಕಾಲ ರಹಸ್ಯವಾಗಿ ಭೇಟಿಯಾಗುತ್ತಲೇ ಇದ್ದರು. ಫೆಬ್ರವರಿ 4 ರಂದು ಇಂದ್ರ ಕುಮಾರಿ ತನ್ನ ಗಂಡನನ್ನು ಬಿಟ್ಟು ಪವನ್ ಕುಮಾರ್ ಜೊತೆ ಓಡಿಹೋಗಿದ್ದಳು ಎಂದು ವರದಿಯಾಗಿದೆ. ಇಂದ್ರ ಕುಮಾರಿ 2022ರಲ್ಲಿ ವಿವಾಹವಾದರು ಎಂದು ಹೇಳಲಾಗುತ್ತಿದೆ. ಆಕೆಯ ಪತಿ ಮದ್ಯ ಸೇವಿಸಿದ ಆಕೆಯನ್ನು ಹೊಡೆಯುತ್ತಿದ್ದನು. ಇದರಿಂದಾಗಿ ಆಕೆಗೆ ಬ್ಯಾಂಕ್ ಉದ್ಯೋಗಿಯೊಂದಿಗಿನ ಆಪ್ತತೆ ಹೆಚ್ಚಾಯಿತು. ಕೊನೆಗೆ ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿ ಮದುವೆಯಾದರು. ಮದುವೆಯ ನಂತರ ಇಂದ್ರ ಕುಮಾರಿ ತನ್ನ ಮಾಜಿ ಪತಿ ಮತ್ತು ಇತರ ಕುಟುಂಬ ಸದಸ್ಯರಿಂದ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.(ಏಜೆನ್ಸೀಸ್)