ಈ ಬಾರಿಯ ಐಪಿಎಲ್ ಪಂದ್ಯಾವಳಿಯನ್ನು ಸಂಪೂರ್ಣ ಉಚಿತವಾಗಿ ನೋಡಬಹುದು ಎಂಬ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಚಂದಾದಾರಿಕೆ ಪಡೆದರೆ ಮಾತ್ರವೇ ಉಚಿತ ಲೈವ್ ಸ್ಟ್ರೀಮಿಂಗ್ ಸಿಗುವ ಸಾಧ್ಯತೆ ಇದೆ. ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾ ವಿಲೀನದಿಂದ ಹೊಸದಾಗಿ ರೂಪುಗೊಂಡ ಜಂಟಿ ಉದ್ಯಮವಾದ ಜಿಯೋಸ್ಟಾರ್‌ನಲ್ಲಿ ಐಪಿಎಲ್ ಪಂದ್ಯಗಳ ಸಂಪೂರ್ಣ ಉಚಿತ ಸ್ಟ್ರೀಮಿಂಗ್ ಇರುವುದಿಲ್ಲ. ಜಿಯೋ ಸಿನೆಮಾ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ವಿಲೀನಗೊಂಡು ಜಿಯೋಸ್ಟಾರ್ ಆಗಿ ರೂಪುಗೊಂಡಿದೆ. ಆದರೆ, ಹೊಸ ಹೈಬ್ರಿಡ್ ಚಂದಾದಾರಿಕೆ ಮಾದರಿಯು ಭಾರತದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕತ್ತರಿ ಹಾಕಲು ಯೋಜಿಸಿದೆ.
ಸುಮಾರು 3 ಲಕ್ಷ ಗಂಟೆಗಳ ಮನರಂಜನೆ, ಲೈವ್ ಸ್ಪೋರ್ಟ್ಸ್ ಕವರೇಜ್ ಮತ್ತು 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋಸ್ಟಾರ್, ವೀಕ್ಷಣೆಯ ವಿಶೇಷ ಅನುಭವವನ್ನು ಒದಗಿಸುವ ಗುರಿ ಹೊಂದಿದೆ. ಆದರೆ, ಈ ಬಾರಿ ಕ್ರಿಕೆಟ್ ಪ್ರಿಯರಿಗೆ ಮಾತ್ರ ನಿರಾಶೆಯಾಗುವ ಸಾಧ್ಯತೆ ಬಗ್ಗೆ ವರದಿಯಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಅಭಿಮಾನಿಗಳು ಚಂದಾದಾರಿಕೆ ಇಲ್ಲದೆ ಐಪಿಎಲ್ ಪಂದ್ಯಗಳನ್ನು ಕೆಲವು ನಿಮಿಷಗಳ ಕಾಲ ಮಾತ್ರ ವೀಕ್ಷಿಸಬಹುದು. ಉಚಿತ ಅವಧಿ ಮುಗಿದ ನಂತರ, ಚಂದಾದಾರರಾಗಬೇಕಾಗುತ್ತದೆ. ಸಬ್ಸ್‌ಕ್ರಿಪ್ಷನ್ ಯೋಜನೆಗಳು 149 ರೂ.ಗಳಿಂದ ಪ್ರಾರಂಭವಾಗಲಿವೆ ಎಂದು ವರದಿ ಹೇಳಿದೆ.

ಹೊಸ ರೀಬ್ರಾಂಡ್ ಅಪ್ಲಿಕೇಶನ್‌ನಲ್ಲಿ ಸಬ್‌ಸ್ಕ್ರಿಪ್ಷನ್ ಆಯ್ಕೆ ಲಭ್ಯವಿರುತ್ತದೆ. ಇಲ್ಲಿ 149 ರೂಪಾಯಿಗಳಿಂದ ಮೂಲ ಯೋಜನೆ ಆರಂಭವಾಗಲಿದೆ. ಮೂರು ತಿಂಗಳವರೆಗೆ 499 ರೂ ಪಾವತಿಸಿ ಜಾಹೀರಾತು-ಮುಕ್ತ ಆವೃತ್ತಿಗೆ ಚಂದಾದಾರರಾಗಬಹುದು ಎಂದು ಮೂಲಗಳು ತಿಳಿಸಿವೆ.
ಅಲ್ಟ್ರಾ-ಎಚ್‌ಡಿ 4ಕೆ ಸ್ಟ್ರೀಮಿಂಗ್, ಎಐ-ಚಾಲಿತ ಒಳನೋಟಗಳು, ನೈಜ-ಸಮಯದ ಅಂಕಿಅಂಶ, ಮಲ್ಟಿ-ಆಂಗಲ್ ವೀಕ್ಷಣೆ ಸೇರಿದಂತೆ ಜಿಯೋಹಾಟ್‌ಸ್ಟಾರ್ ಮೂಲಕ ಉನ್ನತ ಸ್ಟ್ರೀಮಿಂಗ್ ಅನುಭವ ಪಡೆಯಬಹುದು.

