Advertisement

ಪುಣೆ: ವಿರಾಟ್‌ ಕೊಹ್ಲಿ ಅಜೇಯ ಶತಕ, ಶುಭಮನ್‌ ಗಿಲ್‌ ಅರ್ಧಶತಕ, ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಇನ್ನೂ ಬಾಂಗ್ಲಾದೇಶದ ವಿರುದ್ಧ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ ವಿರಾಟ್‌, 26 ಸಾವಿರ ರನ್‌ ಪೂರೈಸಿದ ವಿಶೇಷ ಸಾಧನೆಯನ್ನೂ ಮಾಡಿದ್ದಾರೆ. ಜೊತೆಗೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 78ನೇ ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಸಹ ಎನಿಸಿಕೊಂಡಿದ್ದಾರೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತ್ತು. 257ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 41.3 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 261 ರನ್‌ ಸಿಡಿಸಿ ಗೆಲುವು ಸಾಧಿಸಿತು. ಈ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸತತ 4ನೇ ಗೆಲುವು ತನ್ನದಾಗಿಸಿಕೊಂಡಿತು. ಚೇಸಿಂಗ್‌ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್‌ಗೆ ನಾಯಕ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಜೋಡಿ 12.4 ಓವರ್‌ಗಳಲ್ಲಿ 48 ರನ್‌ ಬಾರಿಸಿತ್ತು. ರೋಹಿತ್‌ 40 ಎಸೆತಗಳಲ್ಲಿ 2 ಸಿಕ್ಸರ್‌, 7 ಬೌಂಡರಿಯೊಂದಿಗೆ 48 ರನ್‌ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು. ಆದ್ರೆ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದ ಗಿಲ್‌ 55 ಎಸೆತಗಳಲ್ಲಿ 53 ರನ್‌ (5 ಬೌಂಡರಿ, 2 ಸಿಕ್ಸರ್)‌ ಬಾರಿಸಿ ನಿರ್ಗಮಿಸಿದರು. ಶ್ರೇಯಸ್‌ ಅಯ್ಯರ್‌ 19 ರನ್‌ಗಳಿ ಔಟಾಗುತ್ತಿದ್ದಂತೆ ಒಂದಾದ ಕೆ.ಎಲ್‌ ರಾಹುಲ್‌ ಹಾಗೂ ವಿರಾಟ್‌ ಕೊಹ್ಲಿ ಜೋಡಿ ಮುರಿಯದ 4ನೇ ವಿಕೆಟ್‌ಗೆ 74 ಎಸೆತಗಳಲ್ಲಿ 783 ರನ್‌ಗಳ ಜೊತೆಯಾಟ ನೀಡಿತು. ವಿರಾಟ್‌ ಕೊಹ್ಲಿ 97 ಎಸೆತಗಳಲ್ಲಿ ಅಜೇಯ 103 ರನ್‌ (6 ಸಿಕ್ಸರ್‌, 6 ಬೌಂಡರಿ) ಗಳಿಸಿದರೆ, ಕೆ.ಎಲ್‌ ರಾಹುಲ್‌ 34 ರನ್‌ (34 ಎಸೆತ, 1 ಸಿಕ್ಸರ್‌, 3 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ಟಾಸ್ ಗೆದ್ದು ಮೊದಲು ಕ್ರೀಸ್‌ಗಿಳಿದ ಬಾಂಗ್ಲಾದೇಶದ ಪರ ಆರಂಭಿಕರಾಗಿ ಕಣಕ್ಕಿಳಿದ ತಂಜಿದ್ ಹಸನ್ ಹಾಗೂ ಲಿಟ್ಟನ್ ದಾಸ್ ಜೋಡಿ ಉತ್ತಮ ಆರಂಭ ನೀಡಿತ್ತು. ಮೊದಲ ವಿಕೆಟ್‌ಗೆ 14.4 ಓವರ್‌ಗಳಲ್ಲಿ 93 ಬಾರಿಸಿತ್ತು. ಈ ಜೋಡಿ ವಿಕೆಟ್ ಬೀಳುತ್ತಿದ್ದಂತೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಸತತ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. 37.2 ಓವರ್‌ಗಳಲ್ಲಿ 179 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮುಶಾಫ್ಕುರ್ ರಹೀಮ್ ಮತ್ತು ಮಹಮೂದುಲ್ಲಾ 32 ರನ್‌ಗಳ ಸಣ್ಣ ಪ್ರಮಾಣದ ಜೊತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮವಾಗಿ ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ತಂಜಿದ್ ಹಸನ್ 51 ರನ್ (43 ಎಸೆತ, 5 ಸಿಕ್ಸರ್, 3 ಬೌಂಡರಿ), ಲಿಟ್ಟನ್ ದಾಸ್ 66 ರನ್ (82 ಎಸೆತ, 7 ಬೌಂಡರಿ), ನಜ್ಮುಲ್ ಹೊಸೈನ್ ಶಾನ್‌ಟೊ 8 ರನ್, ಮೆಹದಿ ಹಸನ್ ಮಿರ್ಜಾ 3 ರನ್, ತೌಹಿದ್ ಹರಿದಿ 16 ರನ್, ಮುಶಾಫ್ಕುರ್ ರಹೀಮ್ 38 ರನ್ (46 ಎಸೆತ, 1 ಸಿಕ್ಸರ್, 1 ಬೌಂಡರಿ), ಮಹಮ್ಮದುಲ್ಲಾ 46 ರನ್ (36 ಎಸೆತ, 3 ಬೌಂಡರಿ, 3 ಸಿಕ್ಸರ್), ನಸುಮ್ ಅಹ್ಮದ್ 14 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರೆ, ಮುಸ್ತಫಿಜುರ್ ರೆಹಮಾನ್ 1 ರನ್, ಶರೀಫುಲ್ ಇಸ್ಲಾಂ 7 ರನ್‌ಗಳಿಸಿ ಅಜೇಯರಾಗುಳಿದರು. ಮಿಂಚಿದ ಬೌಲರ್ಸ್: ಇನ್ನೂ ಆರಂಭದಿಂದಲೂ ಬೌಲಿಂಗ್‌ನಲ್ಲಿ ಪ್ರಾಬಲ್ಯ ಮೆರೆಯುತ್ತಿರುವ ಟೀಂ ಇಂಡಿಯಾ ಬೌಲರ್ಸ್‌ಗಳು ಬಾಂಗ್ಲಾದೇಶ ವಿರುದ್ಧವೂ ಹಿಡಿತ ಸಾಧಿಸಿದ್ದಾರೆ. ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ