ಹೀಟ್ ವೇವ್ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ದಾಖಲಾಗಿದೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮಾನಿಟರಿಂಗ್ ಸೆಂಟರ್ ಮಾ.1ರಂದು ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಸುಳ್ಯದಲ್ಲಿ ಅತ್ಯಧಿಕ 40.1 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಮಾ.2ರಂದೂ ಕರಾವಳಿಯಲ್ಲಿ ಹೀಟ್ ವೇವ್ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ದಕ್ಷಿಣ ಕನ್ನಡದ ನಾಲ್ಕು ಪ್ರದೇಶಗಳು ಮತ್ತು ಉತ್ತರ ಕನ್ನಡದ ಮೂರು ಪ್ರದೇಶಗಳಲ್ಲಿ 39 ಡಿ.ಸೆ.ನಿಂದ 40.1 ಡಿ.ಸೆ. ವರೆಗೆ ಉಷ್ಣಾಂಶ ದಾಖಲಾಗಿರುವುದು ಕಂಡುಬಂದಿದೆ. ಬಂಟ್ವಾಳದಲ್ಲಿ 39.1 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದರೆ, ಕಡಬದಲ್ಲಿ 39 ಡಿ.ಸೆ. ಗರಿಷ್ಠ ಉಷ್ಣಾಂಶವಿತ್ತು. ಐದು ದಿನಗಳವರೆಗೆ ಸಾಮಾನ್ಯವಾಗಿ 37-38 ಡಿ.ಸೆ. ಗರಿಷ್ಠ ಉಷ್ಣಾಂಶ ಜಿಲ್ಲೆಯಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.