ರಾಜ್ಯದಲ್ಲಿ ಇದೀಗ ಪಿಯುಸಿ ಪರೀಕ್ಷೆ (PUC Exam) ನಡೆಯುತ್ತಿದ್ದು, ಕೆಲವು ವಿದ್ಯಾರ್ಥಿಗಳು (Students) ಹೆಚ್ಚಿನ ಅಂಕ ಗಳಿಸಲು ಅಥವಾ ಪಾಸ್ ಆಗಲು ನಕಲು ಮಾಡುವ ತಪ್ಪು ಕೆಲಸಕ್ಕೆ ಕೈ ಹಾಕುತ್ತಾರೆ. ಹಾಗೇ ನಕಲು ಮಾಡಲು ಹೋಗಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ನದಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುಧೋಳ ನಗರದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 17 ವರ್ಷದ ತೇಜಶ್ವಿನಿ ದೊಡ್ಡಮನಿ ಮೃತ ವಿದ್ಯಾರ್ಥಿನಿ. ನಗರದ ಶಾರದಾ ಖಾಸಗಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತೇಜಶ್ವಿನಿ, ಫೆಬ್ರವರಿ 27 ರಂದು ನಡೆದ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಳು.
ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುವಷ್ಟರಲ್ಲಿ ಕಾಲೇಜಿನಿಂದ ಹೊರ ಹೋಗಿದ್ದ ವಿದ್ಯಾರ್ಥಿನಿ
ವಿದ್ಯಾರ್ಥಿನಿ ನಕಲು ಮಾಡುತ್ತಿರುವುದನ್ನು ಕಾಲೇಜು ಸಿಬ್ಬಂದಿ ಪ್ರಶ್ನಿಸಿದ್ದಲ್ಲದೇ, ಪೋಷಕರಿಗೂ ಆ ವಿಚಾರವನ್ನು ತಿಳಿಸಲಾಗಿತ್ತು. ಫೆಬ್ರವರಿ 28 ರಂದು ಕಾಲೇಜಿಗೆ ಬಂದ ಪೋಷಕರು ನಕಲು ಮಾಡಿದ್ದಕ್ಕೆ ಸಾಕ್ಷಿ ಕೇಳಿದ್ದರು. ಆಗ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುವಷ್ಟರಲ್ಲಿ ತೇಜಶ್ವಿನಿ ಕಾಲೇಜಿನಿಂದ ಹೊರ ಹೋಗಿದ್ದಳು.
ಮಹಾರಾಣಿ ಕೆರೆಯಲ್ಲಿ ಶವವಾಗಿ ಪತ್ತೆ
ಮಗಳು ಕಾಣದಿದ್ದಾಗ ಆಕೆಯ ಪೋಷಕರು ಮುಧೋಳ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಲಾಗಿತ್ತು. ಇಂದು ಮುಧೋಳದ ಮಹಾರಾಣಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಸಕ್ತ 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಿನ್ನೆಯಿಂದ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾರ್ಚ್ 1ರಿಂದ 20ರವರೆಗೆ ರಾಜ್ಯಾದ್ಯಂತ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ದತೆ ಮಾಡಿಕೊಂಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 7,13,812 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಹೊಸಬರು 6,61,474 ಪುನರಾವರ್ತಿತ 34,071 ಹಾಗೂ 18,317 ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 1,171 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು, ನಿನ್ನೆ ಮೊದಲ ದಿನ ಪರೀಕ್ಷೆಯಂದು ಬೆಂಗಳೂರು ಉತ್ತರ ಜಿಲ್ಲೆಯ ಮಲ್ಲೇಶ್ವರಂನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಭಯ, ಆತಂಕ ಬಿಟ್ಟು ಧೈರ್ಯವಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ ಎಂದು ಸಚಿವರು ಶುಭ ಹಾರೈಸಿದ್ದಾರೆ.
ಈ ಪರೀಕ್ಷೆ ನಿಮ್ಮ ಜೀವನದ ಒಂದು ಘಟ್ಟವಷ್ಟೇ, ಆತ್ಮವಿಶ್ವಾಸ ಮತ್ತು ಉತ್ತಮ ತಯಾರಿಯೊಂದಿಗೆ ಪರೀಕ್ಷೆ ಎದುರಿಸಿ. ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ಗುರಿಮುಟ್ಟಲು ತಾಯಿ ಶಾರದೆ ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು, ಯಾವುದೇ ಒತ್ತಡಕ್ಕೆ ಒಳಗಾಗದೇ ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಪರೀಕ್ಷೆ ಎದುರಿಸಿ, ಯಶಸ್ಸು ನಿಮ್ಮದಾಗಲಿ ಎಂದು ಶುಭಕೋರಿದ್ದಾರೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ಪ್ರಕಾರ, ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡಲಾಗುತ್ತಿದೆ. ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.