ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಎರಡು ವರ್ಷದ ಮಗು ಮುಹಮ್ಮದ್ ಅಭಿಯಾನ್ (2) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾ.2 ರಂದು ನಿಧನ ಹೊಂದಿದ್ದಾರೆ.
ಹೈದರ್ ಅಲಿ ಮತ್ತು ಮಹ್‌ರೂಫಾ ದಂಪತಿಯ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳ ಪೈಕಿ ಕೊನೆಯವನಾಗಿರುವ ಮುಹಮ್ಮದ್ ಅಭಿಯಾನ್ ಅವರಿಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ನಿನ್ನೆಯ ದಿನ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.
ಬಾಲಕನ ತಂದೆ ಹೈದರ್ ಅಲಿ ಅವರು ಬಿಲ್ಡಿಂಗ್ ಕೆಲಸ ನೋಡಿಕೊಂಡು ಸೌದಿಯಲ್ಲೇ ಇದ್ದಾರೆ. ಪತ್ನಿ ಮಕ್ಕಳು ಮಾತ್ರವಲ್ಲದೆ ಪತ್ನಿಯ ಕುಟುಂಬಸ್ತರೂ ಕೂಡ ಬಹುತೇಕ ಮಂದಿ ಸೌದಿಯಲ್ಲೇ ಅಕ್ಕ ಪಕ್ಕ ಜತೆಯಲ್ಲೇ ನೆಲೆಸಿದ್ದಾರೆ.
ಮೃತ ಬಾಲಕ ತಂದೆ ತಾಯಿ ಮಾತ್ರವಲ್ಲದೆ ಅಕ್ಕ, ಅಣ್ಣನ್ನು ಅಗಲಿದ್ದಾನೆ.
ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ಮಾ.4 ರಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನ ನಡೆಯಿತು.